ಸಚಿವ ಬೈರತಿ ಸುರೇಶ್ ಬಂಧನಕ್ಕೆ ಶೋಭಾ ಕರಂದ್ಲಾಜೆ ಆಗ್ರಹ
ಬೆಂಗಳೂರು : ‘ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ಪಡೆದುದು ಯಾಕೆ? ಅವರ ರಾಜೀನಾಮೆ ಪಡೆದು ನಿವೇಶನ ಹಂಚಿಕೆ ಹಗರಣವನ್ನು ಅವರ ಮೇಲೆ ಹೊರಿಸಲು ಹೊರಟಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಸಚಿವ ಬೈರತಿ ಸುರೇಶ್‍ರನ್ನು ತಕ್ಷಣ ಬಂಧಿಸಬೇಕು’ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬೈರತಿ ಸುರೇಶ್ ಬಂಧನವಾದರೆ ಸತ್ಯ ಹೊರಕ್ಕೆ ಬರಲಿದೆ. ಅವರ ತನಿಖೆ ನಡೆಸಬೇಕಿದೆ. ತಪಾಸಣೆ ಮಾಡಬೇಕಿದೆ, ಅವರು ತಂದ ಕಡತಗಳ ವಿವರ ಪಡೆದುಕೊಳ್ಳಬೇಕು. ಮುಡಾ ಕಾರ್ಯದರ್ಶಿ ಅಮಾನತು ಮಾಡಿದ್ದಾರೆ. ಬಳಿಕ ಅಮಾನತು ವಾಪಸ್ ಪಡೆದಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ 2013ರಲ್ಲಿ ತಮ್ಮ ಕೇಸುಗಳಿಂದ ಹೊರಕ್ಕೆ ಬರಲು ಲೋಕಾಯುಕ್ತ ಮುಚ್ಚಿದ್ದರು. ಟರ್ಫ್‍ಕ್ಲಬ್ ಕೇಸಿನಲ್ಲಿ ಸ್ಟೂವರ್ಡ್ ಮಾಡಲು ಚೆಕ್‍ನಲ್ಲಿ 1.30ಕೋಟಿ ರೂ.ಪಡೆದವರು ಸಿದ್ದರಾಮಯ್ಯ. ಅವರಿಗೆ ಹೇಗೆ ಭ್ರಷ್ಟಾಚಾರರಹಿತರು? ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮೈಸೂರಿಗೆ ಹೋಗಿ 1997ರ ನಂತರದ ಎಲ್ಲ ಕಡತಗಳನ್ನು ಕಾರಿನಲ್ಲಿ ತುಂಬಿಸಿ ತಂದಿದ್ದಾರೆ. ಅವು ಎಲ್ಲಿ ಹೋಗಿವೆ. ಅವುಗಳನ್ನು ಸುಟ್ಟು ಹಾಕಲಾಗಿದೆ ಎಂದು ಅವರು ದೂರಿದರು.
ಅಪರಾಧಕ್ಕೆ ಮೊದಲ ಸಾಕ್ಷಿ: ಸಿಎಂ ಪತ್ನಿಗೆ ನಿವೇಶನ ಕೊಡುವ ಸಂಬಂಧ ಮುಡಾ ನಿರ್ಧಾರವಾದಾಗ ಸಿದ್ದರಾಮಯ್ಯರ ಪುತ್ರ ಯತೀಂದ್ರ ಶಾಸಕರಾಗಿದ್ದರು. ಮುಡಾ ಸದಸ್ಯರೂ ಆಗಿದ್ದರು. ಅವರ ಮೂಗಿನ ನೇರಕ್ಕೆ ನಿರ್ಧಾರವಾಗಿದ್ದು, ಬಡಾವಣೆಯಿಂದ ನಿವೇಶನಗಳು ಸಿಕ್ಕಿವೆ. ಇಷ್ಟೆಲ್ಲ ನಡೆದಾಗ ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆಗಳಲ್ಲಿದ್ದರು. ಪ್ರಭಾರ ಬೀರಿ ಹೆಚ್ಚು ಮೌಲ್ಯಯುತ ಪ್ರದೇಶದಲ್ಲಿ ನಿವೇಶನ ಪಡೆದು ವಾಪಸ್ ಕೊಡಲಾಗಿದೆ. ನಿವೇಶನ ವಾಪಸ್ ಕೊಟ್ಟಿದ್ದೇ ಅಪರಾಧಕ್ಕೆ ಮೊದಲ ಸಾಕ್ಷಿ ಎಂದು ಕರಂದ್ಲಾಜೆ ವಿಶ್ಲೇಷಿಸಿದರು.