ವರಿಷ್ಠರ ಮುಂದೆ ವಿಜಯೇಂದ್ರ ನನ್ನ ಹೆಸರು ಉಲ್ಲೇಖಿಸಿಲ್ಲ ಎಂದು ತಿಳಿದು ಆಘಾತವಾಯಿತು: ಡಿ.ವಿ.ಸದಾನಂದಗೌಡ
"ಒಬ್ಬ ರಾಜ್ಯಾಧ್ಯಕ್ಷ ಕೋರ್ ಕಮಿಟಿ ಅಭಿಪ್ರಾಯ, ವರದಿಯಲ್ಲಿ ವ್ಯಕ್ತವಾಗಿರುವ ಅಂಶವನ್ನು ಹೈಕಮಾಂಡ್ ಮುಂದೆ ಹೇಳಬೇಕಿತ್ತು"
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ಹೆಸರನ್ನು ಉಲ್ಲೇಖಿಸಲಿಲ್ಲ ಎಂಬ ಮತು ಕೇಳಿ ನನಗೆ ಆಘಾತವಾಯಿತು ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
ಗುರುವಾರ ನಗರದಲ್ಲಿ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ‘ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರೇ ನಿಮ್ಮ ಹೆಸರು ಉಲ್ಲೇಖ ಮಾಡಿಲ್ಲ, ವಿವೇಕ್ ರೆಡ್ಡಿ ಹೆಸರು ಉಲ್ಲೇಖ ಮಾಡಿದ್ದಾರೆ’ ಎಂದು ನಮ್ಮ ರಾಜ್ಯದ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ನನಗೆ ತಿಳಿಸಿದರು ಎಂದರು.
ಒಬ್ಬ ರಾಜ್ಯದ ಅಧ್ಯಕ್ಷ, ಕೋರ್ ಕಮಿಟಿ ಅಭಿಪ್ರಾಯ ಹಾಗೂ ವರದಿಯಲ್ಲಿ ವ್ಯಕ್ತವಾಗಿರುವ ಅಂಶವನ್ನು ಹೈಕಮಾಂಡ್ ಮುಂದೆ ಹೇಳಬೇಕಿತ್ತು. ವಿವೇಕ್ ರೆಡ್ಡಿ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲೆ ಇರಲಿಲ್ಲ. ಅವರು(ವಿಜಯೇಂದ್ರ) ಸತ್ಯ ಸಂಗತಿ ಹೇಳುವ ಪ್ರಯತ್ನ ಮಾಡದೆ ಇರುವುದು ನೋವು ತಂದಿದೆ ಎಂದು ಸದಾನಂದಗೌಡ ಹೇಳಿದರು.
ಈಗ ಪ್ರಕಟವಾಗಿರುವ ಪಟ್ಟಿಯಲ್ಲಿ ಅವರ ಸಮುದಾಯ(ವೀರಶೈವ-ಲಿಂಗಾಯತ)ಕ್ಕೆ ಸಾಕಷ್ಟು ಸ್ಥಾನಗಳನ್ನು ಕೊಟ್ಟಿದ್ದಾರೆ. ಬೆಳಗಾವಿ ಕ್ಷೇತ್ರವನ್ನು ಅವರದೆ ಸಮುದಾಯಕ್ಕೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಒಬ್ಬ ಸ್ಥಾನ ಮಾತ್ರ ಒಕ್ಕಲಿಗರಿಗೆ ನೀಡಿದ್ದಾರೆ. ಉಳಿದಿರುವ ಚಿಕ್ಕಬಳ್ಳಾಪುರ ಒಂದು ಕೊಡಬಹುದೇನೋ? ಒಕ್ಕಲಿಗ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನವರು ಬೇರೆ ಬೇರೆ ಸಮುದಾಯಗಳಿಗೆ ಗೌರವ ಕೊಟ್ಟು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಅದರ ಕೊರತೆಯಿದೆ. ನನ್ನ ಅಧ್ಯಕ್ಷರಿಗೆ ನನ್ನ ಮೌಲ್ಯಮಾಪನ ಮಾಡಲು ಆಗುವುದಿಲ್ಲ. ನನ್ನ ಮೌಲ್ಯ ಮಾಪನ ಮಾಡಬೇಕಿರುವುದು ನನ್ನ ಕ್ಷೇತ್ರದ ಕಾರ್ಯಕರ್ತರು, ಅವರೆಲ್ಲರೂ ನನ್ನ ಪರವಾಗಿದ್ದಾರೆ ಎಂದು ಸದಾನಂದಗೌಡ ಹೇಳಿದರು.
ನಮ್ಮಲ್ಲಿ ಆಂತರಿಕವಾಗಿ ಎರಡು ವಿಭಾಗಗಳು ಇದ್ದರೂ ನನ್ನ ಕೆಲಸ, ವ್ಯಕ್ತಿತ್ವ, ರಾಜಕೀಯದ ಬಗ್ಗೆ ಯಾರು ಪ್ರಶ್ನೆ ಮಾಡುವ ಹಾಗಿಲ್ಲ. ಯಾರಿಂದಲೂ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ. ವರಿಷ್ಠರ ಬಳಿ ನಾನು ಯಾವತ್ತು ಭಿಕ್ಷೆ ಬೇಡಿಲ್ಲ, ಅವರ ಹಿಂದೆ ಓಡಾಡಿಲ್ಲ, ಗುಂಪುಗಾರಿಕೆ ಮಾಡಿಲ್ಲ, ಅವರ ಚೇಲಾಗಿರಿ ಮಾಡುವ ಕೆಲಸ ಕಾರ್ಯ ಈವರೆಗೆ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಅವರು ತಿಳಿಸಿದರು.
ಶೋಭಾ ಕರಂದ್ಲಾಜೆ ನಮ್ಮ ಪಕ್ಷದಿಂದ ಅಧಿಕೃತ ಅಭ್ಯರ್ಥಿ. ಅವರ ವಿರುದ್ಧ ಗೋ ಬ್ಯಾಕ್ ಎಂದು ಪ್ರತಿಭಟನೆ ಮಾಡುವುದನ್ನು ನಾನು ವಿರೋಧಿಸುತ್ತೇನೆ. ನಾವು ಹಾಗೂ ನಮ್ಮ ಕಾರ್ಯಕರ್ತರು ಪಕ್ಷದ ಸೂಚನೆಯಂತೆ ಕೆಲಸ ಮಾಡುತ್ತೇವೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.