ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ ನಾಗರಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೀಡಾಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಿದೆ.
ಕಳೆದ ತಿಂಗಳು ನೀಡಿರುವ ಆದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾದ ಕೀರ್ತನ್ ಕುಮಾರ್ ಹಾಗೂ ಸಚಿನ್ ಕುಮಾರ್ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಆದೇಶಿಸಿದ್ದಾರೆ
ಕೀರ್ತನ್ ಕುಮಾರ್ ಹಾಗೂ ಸಚಿನ್ ಕುಮಾರ್ ವಿರುದ್ಧ ನೀಡಿದ್ದ ದೂರಿನನ್ವಯ ಸ್ಥಳೀಯ ಪೊಲೀಸರು ಅವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 295ಎ, 447 ಹಾಗೂ 506ರಡಿ ಪ್ರಕರಣ ದಾಖಲಿಸಿಕೊಂಡಿದ್ದರು. ದೂರಿನ ಪ್ರಕಾರ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಒಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮರ್ಧಾಳದಲ್ಲಿರುವ ಬದ್ರಿಯಾ ಜುಮಾ ಮಸೀದಿಯನ್ನು ಪ್ರವೇಶಿಸಿದ್ದ ಆರೋಪಿಗಳು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು ಎಂದು ಆರೋಪಿಸಲಾಗಿತ್ತು.
ಮಸೀದಿ ಸಾರ್ವಜನಿಕ ಸ್ಥಳವಾಗಿದ್ದು, ಅಂತಲ್ಲಿ ಕ್ರಿಮಿನಲ್ ಅತಿಕ್ರಮ ಪ್ರವೇಶದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದರೊಂದಿಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ ಅಡಿ ವ್ಯಾಖ್ಯಾನಿಸಿರುವಂತೆ ʼಜೈ ಶ್ರೀರಾಮ್ʼ ಘೋಷಣೆ ಕೂಗುವುದು ಅಪರಾಧವಾಗುವುದಿಲ್ಲ ಎಂದೂ ಪ್ರತಿಪಾದಿಸಿದರು.
ಆದರೆ, ಅರ್ಜಿದಾರರ ಪರ ವಕೀಲರ ವಾದವನ್ನು ವಿರೋಧಿಸಿದ ಸರಕಾರಿ ವಕೀಲರು, ಈ ವಿಷಯದಲ್ಲಿ ಮತ್ತಷ್ಟು ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಹಾಲಿ ಪ್ರಕರಣದಲ್ಲಿನ ಆರೋಪಿತ ಅಪರಾಧದಿಂದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್, ಆರೋಪಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಿ ಆದೇಶಿಸಿದೆ.