ಬಳ್ಳಾರಿ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ ಶ್ವೇತಾ ಬಿ.
ಸಂಪೂರ್ಣ ಬಹುಮತದೊಂದಿಗೆ ಚುನಾಯಿತರಾದ ಕಾಂಗ್ರೆಸ್ ಅಭ್ಯರ್ಥಿ
ಬಳ್ಳಾರಿ, ಜ.10: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ 31ನೇ ವಾರ್ಡ್ ಸದಸ್ಯೆ ಶ್ವೇತಾ ಬಿ. ಪೂರ್ಣ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆ ಪಾಲಿಕೆ ಕಚೇರಿಯಲ್ಲಿ 22ನೇ ಅವಧಿಯ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ವೇತಾ 29ಕ್ಕೆ 29 ಮತಗಳನ್ನು ಗಳಿಸಿ ಚುನಾಯಿತರಾಗಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಒಂದನೇ ವಾರ್ಡ್ ಸದಸ್ಯ ಗುಡಗಂಟಿ ಹನುಮಂತಪ್ಪ ಸ್ಪರ್ಧಿಸಿದ್ದರು.
ಕಾಂಗ್ರೆಸ್ ನಿಂದ ಶ್ವೇತಾ ಬಿ., ಶ್ರೀನಿವಾಸ ಮಿಂಚು ಮತ್ತು ವಿ.ಕುಬೇರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಕುತೂಹಲ ಮೂಡಿಸಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವ ನಿರ್ಣಯದಂತೆ ನಾಮಪತ್ರ ಸಲ್ಲಿಸಿದ್ದ ಮೂವರಲ್ಲಿ ಶ್ರೀನಿವಾಸ ಮಿಂಚು, ವಿ.ಕುಬೇರ ತಮ್ಮ ನಾಮಪತ್ರವನ್ನು ಹಿಂಪಡೆದರು. ಚುನಾವಣೆಯಲ್ಲಿ ಶ್ವೇತಾ ನಿರೀಕ್ಷೆಯಂತೆ ಜಯಬೇರಿ ಬಾರಿಸಿದ್ದಾರೆ.
ಪಾಲಿಕೆಯ ಒಟ್ಟು ಸದಸ್ಯರ ಸಂಖ್ಯೆ 39. ಇದರಲ್ಲಿ ಕಾಂಗ್ರೆಸ್ ನ 21 ಮತ್ತು ಬಿಜೆಪಿಯ 13 ಸದಸ್ಯರಿದ್ದಾರೆ. ಪಕ್ಷೇತರರಾಗಿ ಆಯ್ಕೆಯಾಗಿದ್ದ ಐವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ವಿಧಾನಸಭೆಯ ಮೂವರು ಮತ್ತು ಸಂಸತ್ತಿನ ಇಬ್ಬರು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.
ಕಾಂಗ್ರೆಸ್ ನಿಂದ ಒಗ್ಗಟ್ಟು ಪ್ರದರ್ಶನ: ಸಚಿವ ನಾಗೇಂದ್ರ
ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ನಾಗೇಂದ್ರ, ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಗ್ಗಟ್ಟು ಪ್ರದರ್ಶನ ಆಗಿದೆ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಮೇಯರ್ ಆಯ್ಕೆ ನಡೆದಿದೆ. 29ಕ್ಕೆ 29 ಮತಗಳನ್ನು ಪಡೆಯುವ ಮೂಲಕ 31 ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಶ್ವೇತಾ ಬಿ. ಮೇಯರ್ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣಾ ಎದುರಿಸಿದ್ದೇವೆ. ನನ್ನ ಹಾಗೂ ಶಾಸಕ ಭರತ್ ರೆಡ್ಡಿ ನಡುವೆ ಯಾವುದೆ ಒಡಕು ಇಲ್ಲ. ಭರತ್ ರೆಡ್ಡಿ ನನ್ನ ಸಹೋದರನಿದ್ದಂತೆ ಎಂದು ಸ್ಪಷ್ಟನೆ ನೀಡಿದ ನಾಗೇಂದ್ರ, ನಮ್ಮಲ್ಲಿ ಒಡಕಾಗುತ್ತೇ ಅಂತಾ ಬಿಜೆಪಿಯವರು ಕಾಯುತ್ತಿದ್ದರು. ಕಾಂಗ್ರೆಸ್ ನ ಒಗ್ಗಟ್ಟಿನ ಮುಂದೆ ಬಿಜೆಪಿಯ ಗೇಮ್ ನಡೆಯಲಿಲ್ಲ ಎಂದ ಸಚಿವ ನಾಗೇಂದ್ರ ಹೇಳಿದರು.