ಸಿದ್ದಗಂಗಾ ಮಠ ಗೋಕಟ್ಟೆ ದುರಂತ: ಮೃತರ ಕುಟುಂಬಕ್ಕೆ 2ಲಕ್ಷ ಪರಿಹಾರ
ತುಮಕೂರು,ಆ.14:ನಗರದ ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಗೆ ಬಿದ್ದು ಮೃತಪಟ್ಟಿರುವ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ಹಿಂಭಾಗದಲ್ಲಿ ಗೋಕಟ್ಟೆ ಬಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಸಿದ್ದಗಂಗಾ ಮಠದಲ್ಲಿ ಇಂತಹ ಘಟನೆಗಳು ನಡೆಯುವುದು ಬಹಳ ವಿರಳ. ದುರಾದೃಷ್ಟವಶಾತ್ ಈ ಘಟನೆ ನಡೆದು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಸಚಿವರು,ಗೋಕಟ್ಟೆ ಸುತ್ತಲ್ಲೂ ಮುಳ್ಳು ತಂತಿ ಹಾಕಲು ಈಗಾಗಲೇ ಶ್ರೀಮಠ ಸಿದ್ದತೆ ಮಾಡಿಕೊಂಡಿತ್ತು. ಈ ಕಾರ್ಯವನ್ನು ಮಠವೇ ಮುಂದುವರೆಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿನ್ನೆ ಮಧ್ಯಾಹ್ನ ಮೃತ ತಾಯಿ ಹಾಗೂ ಮಗ ಇಂಗು ಗುಂಡಿ ಬಳಿ ಊಟ ಮಾಡಲು ಬಂದಿದ್ದಾರೆ. ಈ ವೇಳೆ ರಂಜಿತ್ ಕಾಲು ಕೆಸರಾಗಿದೆ ಎಂದು ಕಾಲು ತೊಳೆಯಲು ಹೋಗಿ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ.ಆತನನ್ನು ರಕ್ಷಿಸಲು ತಾಯಿ ಹೋಗಿದ್ದಾರೆ. ನಂತರ ಆತನ ಜತೆಗಿದ್ದ ಮತ್ತೊಬ್ಬ ಹುಡುಗ ಕೂಡ ನೀರಿಗೆ ಇಳಿದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಮಹದೇವಪ್ಪ ಎಂಬುವರು ಸಹ ನೀರಿಗೆ ಬಿದ್ದಿದ್ದಾರೆ.ರಂಜಿತನನ್ನು ರಕ್ಷಣೆ ಮಾಡಿ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ.ಶ್ರೀಮಠದ ಶಾಲೆಯ ಶಿಕ್ಷಕರು ಮಕ್ಕಳಿಗೆ ಗೋಕಟ್ಟೆಯ ಬಳಿ ಹೋಗದಂತೆ ತಿಳಿ ಹೇಳಬೇಕು ಎಂದು ವ ಅವರು ಮನವಿ ಮಾಡಿದರು.
ಗೋಕಟ್ಟೆ ಪರಿಶೀಲನೆ ಬಳಿಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಸಚಿವ ಡಾ. ಜಿ. ಪರಮೇಶ್ವರ್ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನು ಕಂಡ ಸಚಿವ ಪರಮೇಶ್ವರ್ ಅವರು ಕುಟುಂಬದವರು ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಹುಲ್‍ಕುಮಾರ್, ಜಿ.ಪಂ. ಸಿಇಓ ಜಿ. ಪ್ರಭು, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಮುರುಳೀಧರ ಹಾಲಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರರಿದ್ದರು.