ಅರ್ಥ ವ್ಯವಸ್ಥೆ ಹಾಳು ಮಾಡುತ್ತಿರುವ ‘ಸಿದ್ದನಾಮಿಕ್ಸ್’: ಎಚ್.ಡಿ.ಕುಮಾರಸ್ವಾಮಿ ಟೀಕೆ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಒಂದು ಕೈಯ್ಯಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಜನರನ್ನು ಬಡತನದಿಂದ ಮಧ್ಯಮ ವರ್ಗಕ್ಕೆ ತಂದಿದ್ದೇವೆ ಎನ್ನುವ ರಾಜ್ಯ ಸರಕಾರ, ಹಾಗೆ ಕೊಟ್ಟು ಹತ್ತು ಕೈಗಳಲ್ಲಿ ಹೀಗೆ ಆ ಹಣವನ್ನು ಕಿತ್ತುಕೊಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ರಾಜ್ಯವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವ ‘ಸಿದ್ದನಾಮಿಕ್ಸ್’. ಐದು ಗ್ಯಾರಂಟಿಗಳ ಮೂಲಕ ಜನರ ಆರ್ಥಿಕ ಶಕ್ತಿ, ಕೊಳ್ಳುವ ಶಕ್ತಿ ಹೆಚ್ಚಿದೆ ಎನ್ನುವ ಸರಕಾರ, ಮುದ್ರಾಂಕ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದೆ. ಮಾರ್ಗದರ್ಶಿ ಮೌಲ್ಯ(ಗೈಡ್ಲೆನ್ಸ್ ವ್ಯಾಲ್ಯೂ)ಆಸ್ತಿ ದರಕ್ಕಿಂತ ಹೆಚ್ಚಾಗಿದೆ. ಅಬ್ಕಾರಿ ಸುಂಕ ಏರುತ್ತಲೇ ಇದೆ. ಒಂದು ಕೈಯ್ಯಲ್ಲಿ ಗ್ಯಾರಂಟಿ ಅಂತ ಕೊಟ್ಟು ಹತ್ತು ಕೈಗಳಲ್ಲಿ ತೆರಿಗೆ ಹೇರುವ ನೀತಿ ಆರ್ಥಿಕತೆಗೆ ಅದ್ಯಾವ ಸೀಮೆಯ ಉತ್ತೇಜನ ನೀಡುತ್ತದೆ? ಎಂದು ಪ್ರಶ್ನೆ ಮಾಡಿದರು.
‘ಈಗ ನನ್ನ ತೆರಿಗೆ ನನ್ನ ಹಕ್ಕು’ ಎನ್ನುತ್ತಿದೆ ಸರಕಾರ. ಹಿಂದೆ ನನ್ನ ನೀರು ನನ್ನ ಹಕ್ಕು! ಎಂದರು. ತಮಿಳ್ನಾಡಿಗೆ ಈಗಲೂ ಕಾವೇರಿ ನೀರು ಹರಿದು ಹೋಗುತ್ತಿದೆ. ಮೇಕೆದಾಟು ಎಲ್ಲಿದೆಯೋ ಅಲ್ಲೇ ಇದೆ. ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸುತ್ತಿದೆ ಕೇಂದ್ರ ಸರಕಾರ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಆದರೆ, ಮುದ್ರಾಂಕ ಶುಲ್ಕ, ಗೈಡ್ಲೆನ್ಸ್ ವ್ಯಾಲ್ಯೂ, ಅಬ್ಕಾರಿ ಸುಂಕ ಸೇರಿ ರಾಜ್ಯದಲ್ಲಿ ತೆರಿಗೆಗಳನ್ನೆಲ್ಲಾ ಹೆಚ್ಚಿಸಲಾಗಿದೆ ಎಂದು ಅವರು ದೂರಿದರು
ಸಂಪುಟ ದರ್ಜೆ ಭಾಗ್ಯ: ರಾಜ್ಯದಲ್ಲಿ ತೀವ್ರ ಬರ ಇದೆ. ಗ್ಯಾರಂಟಿಗಳಿಗೆ ಹಣ ಇಲ್ಲಾ ಎನ್ನುತ್ತಾರೆ. ಆದರೂ 74 ಶಾಸಕರು ಸೇರಿ 90 ಜನರಿಗೆ ಸಂಪುಟ ದರ್ಜೆ ಭಾಗ್ಯ ನೀಡಿ ಜನರ ತೆರಿಗೆಪೋಲು ಮಾಡಲಾಗುತ್ತಿದೆ. ಈ ಪೈಕಿ ಸಿಎಂ ಕಚೇರಿಯಲ್ಲೇ 9 ಜನಕ್ಕೆ ಸಂಪುಟ ಭಾಗ್ಯ ನೀಡಲಾಗಿದೆ. ಇದಕ್ಕಿಂತ ಸೋಜಿಗಾ ಉಂಟಾ? ಎಂದು ಅವರು ಟೀಕಿಸಿದರು.