ಖಾಸಗಿ ಕೈಗಾರಿಕೆಗಳು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.50-75ರಷ್ಟು ಉದ್ಯೋಗ ಮೀಸಲಾತಿ : ಸಿದ್ದರಾಮಯ್ಯ
ಶೇ.100ರಷ್ಟು ಮೀಸಲಾತಿ ಎಂದು ಪೋಸ್ಟ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದ ಸಿಎಂ
ಬೆಂಗಳೂರು : ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಂಬಂಧ ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಹೊಸ ಅಪ್ಡೇಟ್ ನೀಡಿದ್ದಾರೆ. ಈ ಹಿಂದೆ ಕನ್ನಡಿಗರಿಗೆ ʼಖಾಸಗಿ ಕಂಪನಿಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಶೇ.100ರಷ್ಟು ಮೀಸಲಾತಿ ಎಂದು ಪೋಸ್ಟ್ ಹಂಚಿಕೊಂಡಿದ್ದ ಸಿಎಂ, ಬಳಿಕ ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಇದರಿಂದ ಗೊಂದಲ ಸೃಷ್ಠಿಯಾಗಿತ್ತು.
ಈ ಸಂಬಂಧ ಹೊಸ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಸಿಎಂ, ಉದ್ಯೋಗ ಮೀಸಲಾತಿ ಸಂಬಂಧ ಉಂಟಾಗಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಿಎಂ ಪೋಸ್ಟ್‌ನಲ್ಲಿ ಏನಿದೆ? :
"ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ" ಎಂದು ತಿಳಿಸಿದ್ದಾರೆ.
ʼಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆʼ ಎಂದು ಹೇಳಿದ್ದಾರೆ.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ… pic.twitter.com/efmv4gJ25d
— CM of Karnataka (@CMofKarnataka) July 17, 2024