ಎಸ್.ನಿಜಲಿಂಗಪ್ಪನವರ ತತ್ವಾದರ್ಶಗಳು ಸ್ಪೂರ್ತಿದಾಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಕರ್ನಾಟಕದ ಅಭಿವೃದ್ದಿ ಪಥಕ್ಕೆ ಅಡಿಗಲ್ಲು ಹಾಕಿದ ಎಸ್.ನಿಜಲಿಂಗಪ್ಪನವರ ತತ್ವಾದರ್ಶಗಳು ಸ್ಪೂರ್ತಿದಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ʼಕನ್ನಡ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ದಿವಂಗತ ಎಸ್.ನಿಜಲಿಂಗಪ್ಪ ಅವರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರು ಈ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಮೌಲ್ಯಯುತ ರಾಜಕೀಯ ಜೀವನವನ್ನು ನಡೆಸಿಕೊಂಡು ಬಂದ ನಿಜಲಿಂಗಪ್ಪನವರು ನೀರಾವರಿ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದಾರೆ. ನಿಜಲಿಂಗಪ್ಪನವರ ತತ್ವಾದರ್ಶಗಳು ಸ್ಪೂರ್ತಿದಾಯಕವಾಗಿವೆʼ ಎಂದರು.
ಬಿಜೆಪಿ , ಎನ್ಡಿಎ ಸರಕಾರ ಅಲ್ಪಸಂಖ್ಯಾತ ವಿರೋಧಿ :
ಸಂಸತ್ ನಲ್ಲಿ ಇಂದು ವಕ್ಫ್ ಬೋರ್ಡ್ ತಿದ್ದುಪಡಿ ಬಗ್ಗೆ ವಿಧೇಯಕ ಮಂಡನೆಯಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಎನ್ಡಿಎ ಸರಕಾರ ದೇಶದ ಅಲ್ಪಸಂಖ್ಯಾತರ ವಿರೋಧಿಗಳು ಎಂಬುದನ್ನು ಅವರ ಈ ನಡೆ ನಿರೂಪಿಸುತ್ತಿದೆ. ಅವರು ಜಾತ್ಯಾತೀತ, ಸಾಮಾಜಿಕ ನ್ಯಾಯದ ಸಿದ್ದಾಂತಗಳನ್ನು ಬೆಂಬಲಿಸದ ಕೋಮುವಾದಿ ಪಕ್ಷವಾಗಿದ್ದಾರೆ ಎಂದು ತಿಳಿಸಿದರು
ಮುಖ್ಯಮಂತ್ರಿಯವರ ಹಾಗೂ ಬಿ.ಕೆ ಹರಿಪ್ರಸಾದ್ ರ ಭೇಟಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಉಭಯ ಕುಶಲೋಪರಿ ಮಾತುಕತೆ ನಡೆಸಲಾಗಿದೆ ಎಂದರು.