‘ರಾಜ್ಯಪಾಲರೇ ರಾಜೀನಾಮೆ ನೀಡಬೇಕು’ : ಮುಖ್ಯಮಂತ್ರಿ ಬೆನ್ನಿಗೆ ನಿಂತ ಸಚಿವ ಸಂಪುಟ
ಕಾಂಗ್ರೆಸ್ ಸರಕಾರವನ್ನು ಅಸ್ಥಿತರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ : ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ನಿವೇಶನ ಹಂಚಿಕೆಯಲ್ಲಿ ಆಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ಸಚಿವ ಸಂಪುಟವು, ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬೆನ್ನಿಗೆ ನಿಲ್ಲಲು ಒಕ್ಕೊರಲ ನಿರ್ಧಾರ ಕೈಗೊಂಡಿದೆ.
ಶನಿವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಯ, ಸತ್ಯದ ಪರವಾಗಿ ನಿಂತು ಪ್ರಜಾಪ್ರಭುತ್ವ ಉಳಿವಿನ ಹೋರಾಟಕ್ಕೆ ಗಟ್ಟಿಯಾಗಿ ನಿಂತಿರುವ ಸಚಿವ ಸಂಪುಟ, ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ಕಾಂಗ್ರೆಸ್ ಪಕ್ಷ, ಹೈ ಕಮಾಂಡ್ ಮತ್ತು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಧನ್ಯವಾದಗಳು ಎಂದರು.
ರಾಜ್ಯಪಾಲರ ತೀರ್ಮಾನ ಅಸಂವಿಧಾನಿಕ, ಕಾನೂನುಬಾಹಿರ ಎಂದು ಸಚಿವ ಸಂಪುಟ ಖಂಡಿಸಿದೆ. ರಾಜ್ಯಪಾಲರು ಸಂವಿಧಾನದ ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರಕಾರ ಹಾಗೂ ಬಿಜೆಪಿ ಪ್ರತಿನಿಧಿಯಂತೆ ಕೆಲಸ ಮಾಡಿದ್ದಾರೆ. ಕೇಂದ್ರ ಸರಕಾರ ಜನರ ಆಶೀರ್ವಾದದಿಂದ ರಚನೆಯಾಗಿರುವ ಕಾಂಗ್ರೆಸ್ ಸರಕಾರವನ್ನು ಅಸ್ಥಿತರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಕೇಂದ್ರದ ಕೈ ಗೊಂಬೆಯಂತೆ ನಡೆದುಕೊಳ್ಳುವುದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಆದುದರಿಂದ, ರಾಜ್ಯಪಾಲರ ನಡವಳಿಕೆಯನ್ನು ಸಚಿವ ಸಂಪುಟ ಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಅವರು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಮಾಡಿರುವ ತೀರ್ಮಾನವಿದು. ನಮ್ಮ ಸರಕಾರ ಬಡವರ ಪರವಾಗಿದೆ. ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ನವರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ಯಾರಂಟಿಗಳನ್ನು ಮೋದಿ, ಅಮಿತ್ ಶಾ ವಿರೋಧಿಸಿದ್ದರು ಎಂದು ಅವರು ಹೇಳಿದರು.
ರಾಜ್ಯಪಾಲರನ್ನು ಬಳಸಿಕೊಂಡು ನನ್ನ ತೇಜೋವಧೆ ಮಾಡಲು ಮುಂದಾಗಿದ್ದಾರೆ. ನಾಡಿನ ಜನತೆಯ ಆಶೀರ್ವಾದ ನನ್ನ, ನಮ್ಮ ಪಕ್ಷ ಹಾಗೂ ಮುಖಂಡರ ಮೇಲಿದೆ. ಅವರ ಕುಟಿಲ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಚುನಾಯಿತ ಸರಕಾರವನ್ನು ಅಸ್ತಿರಗೊಳಿಸುತ್ತೇವೆ ಅನ್ನೋದು ಅವರ ಭ್ರಮೆ ಎಂದು ಸಿದ್ದರಾಮಯ್ಯ ಹೇಳಿದರು.
ಅಬ್ರಹಾಂ ಜು.26ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರಿಗೆ ದೂರು ನೀಡಿದರು. ಅಂದು ರಾತ್ರಿ 10 ಗಂಟೆಗೆ ನಮಗೆ ಶೋಕಾಸ್ ನೋಟಿಸ್ ಕೊಟ್ಟಿದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನರೆ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದರೂ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಿಲ್ಲ ಎಂದು ಅವರು ದೂರಿದರು.
ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ತನಿಖೆ ನಡೆದು ಅವರು ತಪ್ಪಿತಸ್ಥ ಎಂದು ಉಲ್ಲೇಖವಾಗಿದ್ದರೂ, ತನಿಖೆಯ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದರೂ ತನಿಖೆಗೆ ಅನುಮತಿ ನೀಡಿಲ್ಲ. ಹಾಗೆಯೇ ಮುರುಗೇಶ್ ನಿರಾಣಿ ಮತ್ತು ಜನಾದರ್ದನ ರೆಡ್ಡಿ ವಿರುದ್ಧ ತನಿಖೆ ನಡೆದು ಅವರು ತಪ್ಪಿತಸ್ಥರು ಎಂದು ಸಾಬೀತಾಗಿ, ತನಿಖಾ ವರದಿ ಉಲ್ಲೇಖವಾಗಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿಲ್ಲ. ಆದರೆ ನನ್ನ ವಿಚಾರದಲ್ಲಿ ಮಾತ್ರ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧ ತನಿಖೆ ನಡೆದಿಲ್ಲ. ತನಿಖೆಯಲ್ಲಿ ನನ್ನ ಪಾತ್ರದ ಉಲ್ಲೇಖವಿಲ್ಲ. ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಟ್ಟಿಲ್ಲ. ನನ್ನ ಸರಕಾರದ ಅವಧಿಯಲ್ಲಿ ನಡೆದ ವಿಚಾರ ಇದಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ನನ್ನಿಂದ ಒಂದೂ ಮನವಿ ಪತ್ರವೂ ಹೋಗಿಲ್ಲ. ಎಲ್ಲವೂ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ನಾನು ಏಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರದ ಬಗ್ಗೆ ಎಲ್ಲೂ, ಯಾರೂ ಹೇಳುತ್ತಿಲ್ಲ. ಆದರೂ ನಾನೇಕೆ ರಾಜೀನಾಮೆ ನೀಡಲಿ ಹೇಳಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಹೀಗೆ ಯಾವುದೇ ದಾಖಲೆ, ಸಾಕ್ಷ್ಯ, ತನಿಖೆ ಇಲ್ಲದಿದ್ದರೂ ರಾಜ್ಯಪಾಲರು ಆಧಾರವಿಲ್ಲದೆ ಅನುಮತಿ ನೀಡಿ ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದಾರೆ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ. ಬಿಜೆಪಿ-ಜೆಡಿಎಸ್ ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ನಾವು ಸತ್ಯ ಮುಂದಿಟ್ಟು ಜನರ ನಡುವೆ ಮತ್ತಷ್ಟು ಗಟ್ಟಿ ಆಗುತ್ತೇವೆ. ನಮ್ಮ ಸಮಾವೇಶಕ್ಕೆ ಒಂದೂವರೆ ಲಕ್ಷ ಜನ ಸೇರಿದ್ದರು. ಬಿಜೆಪಿ ಸಮಾವೇಶಕ್ಕೆ 30 ಸಾವಿರ ಜನರು ಸೇರಿಲ್ಲ. ಜನ ನಮ್ಮ ಪರವಾಗಿ ಇರುವುದಕ್ಕೆ ಇದೇ ಸಾಕ್ಷಿ ಎಂದು ಮುಖ್ಯಮಂತ್ರಿ ಹೇಳಿದರು.
ಗೇಟುಗಳ ಅಳವಡಿಕೆ ಯಶಸ್ವಿ ಅಳವಡಿಕೆ ಯಶಸ್ವಿ:
ತುಂಗಭದ್ರಾ ಡ್ಯಾಂಗೆ 5 ಗೇಟುಗಳ ಯಶಸ್ವಿ ಅಳವಡಿಕೆಗೆ ರಾಜ್ಯದ ರೈತರ ಪರವಾಗಿ ಕನ್ನಯ್ಯ ನಾಯ್ಡು ಮತ್ತು ಅಧಿಕಾರಿಗಳು, ಎಂಜಿನಿಯರ್ ಗಳು, ಸಿಬ್ಬಂದಿ, ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧನ್ಯವಾದ, ಕೃತಜ್ಞತೆ ಸಲ್ಲಿಸಿದರು.
"ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವುದಕ್ಕೆ ಸಚಿವ ಸಂಪುಟ ಸಭೆ ಖಂಡನೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷ, ಸಚಿವ ಸಂಪುಟ ಮುಖ್ಯಮಂತ್ರಿ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡಿ ಗೆಲ್ಲುತ್ತೇವೆ. ಕ್ಯಾಬಿನೆಟ್ ನೋಟ್ ನಲ್ಲಿ ನಾವು ತಿಳಿಸಿದ್ದ ಕಾನೂನಾತ್ಮಕ ಸಂಗತಿಗಳನ್ನು ರಾಜ್ಯಪಾಲರು ಪರಿಗಣಿಸದಿರುವುದು ಅವರ ದುರುದ್ದೇಶವನ್ನು, ರಾಜಭವನದ ದುರುದ್ದೇಶವನ್ನು ಎತ್ತಿ ತೋರಿಸುತ್ತಿದೆ"
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ