ಮಹಾರಾಷ್ಟ್ರ ಜಲಾಶಯಗಳಿಂದ ರಾಜ್ಯಕ್ಕೆ ನೀರು ಹರಿಸಲು ಕೋರಿ ಪತ್ರ ಬರೆದ ಸಿದ್ದರಾಮಯ್ಯ
ಬೆಂಗಳೂರು : ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ್ನು ಪೂರೈಸಲು ಮಹಾರಾಷ್ಟ್ರದ ಕೊಯ್ನಾ ಜಲಾಶಯಗಳಿಂದ ಮೂರು ಟಿಎಂಸಿ ನೀರನ್ನು ಹರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‍ಗೆ ಪತ್ರ ಬರೆದಿರುವ ಅವರು, ಮಹಾರಾಷ್ಟ್ರದ ವಾರಣಾ/ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 2 ಟಿಎಂಸಿ ನೀರನ್ನು ಮತ್ತು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಮಾರ್ಚ್ ಆರಂಭದಿಂದಲೂ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೇಸಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮಹಾರಾಷ್ಟ್ರ ಸರಕಾರವು ಕೃಷ್ಣಾ ನದಿಯ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ ಉತ್ತರ ಕರ್ನಾಟಕದ ಪರಿಸ್ಥಿತಿಯು ಹಿಂದಿಗಿಂತಲೂ ಹೆಚ್ಚು ಗಂಭೀರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಪ್ಪರಗಿ ಬ್ಯಾರೇಜ್ ಸೇರಿ ಸ್ಥಳೀಯ ಜಲಾಶಯಗಳಲ್ಲಿ ಸಂಗ್ರಹವಾದ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ 2025ರಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದುದರಿಂದ ನೀರನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.