ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯನವರು ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಇಬ್ಬರೂ ಕಾಂಗ್ರೆಸ್ನ ಎರಡೂ ಕಣ್ಣು ಇದ್ದ ಹಾಗೆ. ಸಿದ್ದರಾಮಯ್ಯನವರು ಪಕ್ಷ ಕೊಟ್ಟ ಮಾತಿನಂತೆ ಯೋಜನೆಗಳನ್ನು ಜಾರಿ ಮಾಡಿ ಸಮರ್ಥ ಆಡಳಿತ ಮಾಡುತ್ತಿದ್ದಾರೆ ಎಂದು ನುಡಿದರು.
ನಾನು ತಳಮಟ್ಟದದಿಂದ ಬಂದ ಕಾರ್ಯಕರ್ತೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ ಎಂದು ಅವರು ವಿವರಣೆ ನೀಡಿದರು.
‘ವಿಷ ಕನ್ಯೆ’ ಪದ ಬಳಿಕೆ ಮಾಡಿರುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ಅವರ ಸಂಸ್ಕೃತಿ ಎಂತಹದ್ದು ಎಂದು ರಾಜ್ಯದ ಜನರು ನೋಡಿದ್ದಾರೆ. ಅವರಿಗೆ ರಾಜ್ಯದ ಜನರೇ ತಕ್ಕ ಉತ್ತರ ಕೊಡುತ್ತಾರೆ. ಭಾರತ ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟವರು ನಾವು. ಅವರು ವಿಷ ಕನ್ಯೆ ಅಂತಾರೋ, ಇನ್ನೊಂದು ಕನ್ಯೆ ಅಂತಾರೋ, ಅವರು ಏನು, ಅವರ ಸಂಸ್ಕೃತಿ ಏನು ಎನ್ನುವುದನ್ನು ಇಡೀ ಜನರು ನೋಡಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ ಎಂದರು.
‘ರಾಜಕಾರಣ ನಿಂತ ನೀರಲ್ಲ. ಸೊಲನ್ನು ಸಮಾನವಾಗಿ ಸ್ವೀಕಾರ ಮಾಡಿ ಗೆಲುವಿನ ಮುನ್ನಡಿ ಬರೆದಿರುವುದು ಜನರಿಗೆ ಗೊತ್ತಿದೆ. ಈಗ ನನ್ನ ಮಗ ಸೋಲು ಕಂಡಿದ್ದಾನೆ. ಎಲ್ಲಿ ಸೋಲು ಕಂಡಿದ್ದಾನೋ ಅಲ್ಲಿಯೇ ಗೆಲ್ಲಬೇಕು ಎನ್ನುವ ಛಲ ನನ್ನ ಮಗ ಮಾಡಿದ್ದಾನೆ. ಒಂದು ಸೋಲಿನಿಂದ ಕಂಗೇಡುವಂತಿಲ್ಲ. ನಾವು ಮೌನಕ್ಕೆ ಜಾರಿರುವುದು ಏಕೆಂದರೆ ಎಲ್ಲಿ ನಮ್ಮಿಂದ ತಪ್ಪಾಗಿದೆ ಎನ್ನುವುದನ್ನು ಹುಡುಕುತ್ತಿದ್ದೇವೆ’
-ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ