ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಪಾರದರ್ಶಕ ಭ್ರಷ್ಟ ಆಡಳಿತ ಜಾರಿ : ಸಿ.ಟಿ.ರವಿ ಟೀಕೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಪಾರದರ್ಶಕ ಭ್ರಷ್ಟ ಆಡಳಿತವನ್ನು ಜಾರಿ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಬಳಿಕ ಬಿಜೆಪಿ-ಜೆಡಿಎಸ್ ಶಾಸಕರೊಂದಿಗೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪಾರದರ್ಶಕ ಪ್ರಾಮಾಣಿಕ ಆಡಳಿತ ಅಲ್ಲ, ಪಾರದರ್ಶಕ ಭ್ರಷ್ಟ ಆಡಳಿತ ಇದು. ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಆದರೆ, ಆಡಳಿತದಲ್ಲಿ ಪೂರ್ಣ ಇರುವುದು ಭ್ರಷ್ಟಾಚಾರ ಮಾತ್ರ ಎಂದು ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ರೇಟ್ ಕಾರ್ಡ್ ಅನುಗುಣವಾಗಿ ಎಫ್‍ಎಆರ್ ( ಪ್ಲೋರ್ ಏರಿಯ ರೇಷಿಯೋ) ಒಂದು ಚದರಡಿಗೆ 100 ರೂ, ಸಿಎಲ್‍ಯು (ಚೇಂಜ್ ಆಫ್ ಲ್ಯಾಂಡ್ ಯೂಸ್- ಭೂ ಪರಿವರ್ತನೆಗೆ) ಒಂದು ಎಕರೆಗೆ 27 ಲಕ್ಷ ಫಿಕ್ಸ್ ಆಗಿದೆ. ಗೃಹ ಇಲಾಖೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್‌ಗೆ 50 ಲಕ್ಷದಿಂದ ಒಂದು ಕೋಟಿ ರೂ.ಇದ್ದು, ಅದು ಜಾಗದ ಮೇಲೆ ಕಿಮ್ಮತ್ತು ಹೆಚ್ಚು ಕಡಿಮೆ ಆಗುತ್ತದೆ ಎಂದು ಅವರು ದೂರಿದರು.
ಕಾಂಗ್ರೆಸ್ಸಿನ ಭ್ರಷ್ಟಾಚಾರ ಬರಿಗಣ್ಣಿಗೆ ಕಾಣುತ್ತದೆ. ಇದು ಕಾಂಗ್ರೆಸ್ಸಿನ ಪ್ರಾಮಾಣಿಕವಲ್ಲದ ಭ್ರಷ್ಟ ಆಡಳಿತದ ಝಲಕ್. ವಾಲ್ಮೀಕಿ ನಿಗಮದ ಭ್ರಷ್ಟಾಚಾರವನ್ನು ಬಯಲಿಗೆ ತರುವ ಮೂಲಕ ನಾವು ಇವರ ಭ್ರಷ್ಟ ಆಡಳಿತವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೇವೆ. ಹಾಗೇ ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ದುರ್ಬೀನು ಹಾಕುವ ಅವಶ್ಯಕತೆ ಇಲ್ಲ ಎಂದು ಸಿ.ಟಿ.ರವಿ ತಿಳಿಸಿದರು.