ಸಿದ್ದರಾಮಯ್ಯ, ಡಿಕೆಶಿಗೆ ಜಗತ್ತೇ ಮೆಚ್ಚಿದ ಮೋದಿಯವರನ್ನು ಟೀಕೆ ಮಾಡುವಷ್ಟು ದುರಹಂಕಾರ ಬಂದಿದೆ: ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ''ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಇಡೀ ಜಗತ್ತೇ ಮೆಚ್ಚಿದ ಪ್ರಧಾನಿಯವರ ಬಗ್ಗೆ ಟೀಕೆ ಮಾಡುವಷ್ಟು ದುರಹಂಕಾರ ಇವರಿಗೆ ಬಂದಿದೆ'' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ತಮ್ಮ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಸರಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ''
ಇನ್ನು, ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಅವಧಿ ಮುಂದೂಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್ ಯಡಿಯೂರಪ್ಪ, ''ಸರಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ. ಸರಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ'' ಎಂದು ಕಿಡಿಕಾರಿದರು.