"ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನಿಲ್ಲಿಸಿ": ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಮುಖ್ಯಮಂತ್ರಿ ಸಿದ್ದರಾಮಯ್ಯ (Photo:X)
ಬೆಂಗಳೂರು: ‘ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಗೋಳಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರೇ, ಮಹಿಳಾ ಭಕ್ಷಣೆ ಮತ್ತು ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನೀವು ನಿಲ್ಲಿಸಿದರೆ ರಾಜ್ಯದಲ್ಲಿ ಮಹಿಳೆಯರು ಮಾತ್ರವಲ್ಲ ಬಾಲಕಿಯರೂ ಸುರಕ್ಷಿತರಾಗಿರುತ್ತಾರೆ. ರಾಜ್ಯವೂ ಮಹಿಳೆಯರ ಪಾಲಿಗೆ ಸುರಕ್ಷಿತವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಷ್ಟ್ ಹಾಕಿರುವ ಅವರು, ರಾಜ್ಯದಲ್ಲಿರುವ ನಿಮ್ಮ ಪಕ್ಷದ ಒಬ್ಬ ಸರ್ವೊಚ್ಚ ನಾಯಕರು ಪೋಕ್ಸೊ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ನಿಮ್ಮ ಮಿತ್ರಪಕ್ಷವಾದ ಜೆಡಿ(ಎಸ್)ನ ಮಾಜಿ ಸಂಸದ ನೂರಾರು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಾಗಿರುವ ಅವನ ತಂದೆ ಮೇಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ಅದೇ ಕುಟುಂಬದ ಇನ್ನೊಬ್ಬ ಶಾಸಕ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾನೆ. ಇಂತಹ ಮಹಿಳಾ ಭಕ್ಷಕರನ್ನು ಕಟ್ಟಿಕೊಂಡು ಮೆರೆಯುತ್ತಿರುವ ನಿಮಗೆ ನಮ್ಮ ಸರಕಾರದ ವಿರುದ್ಧ ಆರೋಪ ಮಾಡುವ ಯಾವ ನೈತಿಕತೆ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯ ಹಿಂದಿನ ಕಪಟ(ಹಿಪಾಕ್ರಸಿ)ವನ್ನು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಬಂಡಿ ಸಂಜೀವ್ ಕುಮಾರ್ ಲೋಕಸಭೆಯಲ್ಲಿ ದಾಖಲೆ ಸಹಿತ ಬಿಡಿಸಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘2014ರಲ್ಲಿ ದೇಶದ 3,39,457 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದರೆ 2022ರಲ್ಲಿ ಈ ಸಂಖ್ಯೆ 4,45,256ಕ್ಕೆ ಏರಿದೆ. ಇದೇ ಅವಧಿಯಲ್ಲಿ ಮಕ್ಕಳ ಮೇಲಿನ ಅತ್ಯಾಚಾರಗಳ ಸಂಖ್ಯೆ 89,423ರಿಂದ 1,62,449ಕ್ಕೆ ಹೆಚ್ಚಿದೆ’ ಎಂದು ಕೇಂದ್ರ ಸಚಿವರು ಕಳೆದ ಜುಲೈ 30ರಂದು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಇದೇನಾ ನೀವು ಹೇಳುತ್ತಿರುವ ಬೇಟಿ ಬಚಾವೋ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್ಸಿಆರ್ಬಿಯ 2021ರ ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ 86 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಪ್ರತಿ ಗಂಟೆಗೆ 49 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳಲ್ಲಿ ಕಳೆದ ಆರು ವರ್ಷಗಳಿಂದ ಬಿಜೆಪಿ ಆಡಳಿತದ ಉತ್ತರ ಪ್ರದೇಶ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
2017ರಲ್ಲಿ ಉತ್ತರಪ್ರದೇಶದ ಉನ್ನಾವೊದಲ್ಲಿ 2020ರಲ್ಲಿ ಅದೇ ರಾಜ್ಯದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಗಳ ಪ್ರಕರಣಗಳಲ್ಲಿ ಆರೋಪಿಗಳಿಗೆ ರಕ್ಷಣೆ ಮಾಡುತ್ತಿರುವವರು ಯಾರು ಬಿಜೆಪಿ ನಾಯಕರೇ? ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಬಿಜೆಪಿ ಮಾಜಿ ಸಂಸದ ಬೃಜ್ ಭೂಷಣ್ ಸರಣ್ ಸಿಂಗ್ ಎಂಬ ಸ್ತ್ರೀಪೀಡಕನನ್ನು ರಕ್ಷಿಸುತ್ತಿರುವವರು ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ನಿಮಗಿದೆಯಾ? ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
‘‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’’ ಎಂದು ಗೋಳಾಡುತ್ತಿರುವ ರಾಜ್ಯದ @BJP4Karnataka ನಾಯಕರೇ, ಮಹಿಳಾ ಭಕ್ಷಣೆ ಮತ್ತು ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನೀವು ನಿಲ್ಲಿಸಿದರೆ ರಾಜ್ಯದಲ್ಲಿ ಮಹಿಳೆಯರು ಮಾತ್ರವಲ್ಲ ಬಾಲಕಿಯರೂ ಸುರಕ್ಷಿತರಾಗಿರುತ್ತಾರೆ. ರಾಜ್ಯವೂ ಮಹಿಳೆಯರ ಪಾಲಿಗೆ… pic.twitter.com/CaoaE668po
— Siddaramaiah (@siddaramaiah) August 26, 2024
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಸಿಆರ್ಬಿಯ 2021ರ ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ 86 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಪ್ರತಿ ಗಂಟೆಗೆ 49 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣಗಳಲ್ಲಿ ಕಳೆದ ಆರು ವರ್ಷಗಳಿಂದ @BJP4India ಆಡಳಿತದ ಉತ್ತರಪ್ರದೇಶ… pic.twitter.com/J9A630jqpg
— Siddaramaiah (@siddaramaiah) August 26, 2024