ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ: ನಳಿನ್ ಕುಮಾರ್ ಕಟೀಲ್
Photo: facebook.com/kateelnalin
ವಿಜಯಪುರ: ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ. ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆಯೇ ಹೊರತು, ರೈತರ ಹಿತ ಕಾಪಾಡಾಲು ಯೋಚಿಸುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮರ್ಪಕವಾಗಿ ವಿದ್ಯುತ್ ನೀಡಿದ್ದಿರೆ ರೈತರು ಬೆಳೆದ ತಮ್ಮ ಅಲ್ಪಸ್ವಲ್ಪ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಪೂರ್ಣ ಪ್ರಮಾಣದಲ್ಲಿ ಕೃಷಿ ನಷ್ಟವಾಗಿದೆ. ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ರೈತರ ಹಿತ ರಕ್ಷಣೆ ಮಾಡುತ್ತಿಲ್ಲ, ಕುರ್ಚಿ ರಕ್ಷಣೆ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ ಎಂದರು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತಿವೃಷ್ಠಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರಿಹಾರ ಹಣಕ್ಕೆ ಕಾಯದೇ, ಎನ್ ಡಿಆರ್ ಎಫ್ ಮಾರ್ಗಸೂಚಿ ಮೀರಿ ತಕ್ಷಣ ಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟಿದ್ದರು. ಅದೇ ರೀತಿ ಸಿದ್ದರಾಮಯ್ಯ ನವರು ರೈತರಿಗೆ ಸೂಕ್ತ ಪರಿಹಾರ ತಕ್ಷಣವೇ ಒದಗಿಸಬೇಕು ಎಂದು ಆಗ್ರಹಿಸಿದರು.
ಸಚಿವರು ಇದುವರೆಗೂ ರೈತರ ಆಹವಾಲು ಆಲಿಸಿಲ್ಲ. ಪ್ರಭಾವಿ ಸಚಿವರ ಕ್ಷೇತ್ರವಾದ ತಿಕೋಟವನ್ನೇ ಬರ ಪೀಡಿತ ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ. ಅಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ತಿಕೋಟಾ ತಾಲ್ಲೂಕನ್ನು ಬರಗಾಲ ಪಟ್ಟಿಯಿಂದ ಹೊರಗಿಟ್ಟಿದ್ದಾರೆ.ಬರದಿಂದ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ, ಈಗಾಗಲೇ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿದೆ. ಆದರೆ, ರಾಜ್ಯ ಸರ್ಕಾರ ಬರದಿಂದ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಇನ್ನೂ ವರದಿ ಕೊಟ್ಟಿಲ್ಲ ಎಂದು ದೂರಿದರು.
ಬಿಜೆಪಿ ರಾಜ್ಯದಾದ್ಯಂತ ಸಂಚರಿಸಿ ಬರ ಅಧ್ಯಯನ ಮಾಡಿದ ಬಳಿಕ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ, ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರುತ್ತೇವೆ ಎಂದರು.