ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ: ಆರ್. ಅಶೋಕ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ. ತಾವು ಸಜ್ಜನ ಎಂದು ಅವರು ಯಾವಾಗಲೂ ಹೇಳಿಕೊಳ್ಳುತ್ತಾರೆ. ಅಂತಹ ಸಜ್ಜನನಾಗುವ ಅವಕಾಶ ಎಂದರೆ ಅದು ರಾಜೀನಾಮೆ ನೀಡುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಬಂದಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಕೂಡಲೇ ರಾಜೀನಾಮೆ ಕೊಡಬೇಕಿತ್ತು. ಎಫ್‍ಐಆರ್ ಆದ ಬಳಿಕ ಪೊಲೀಸರ ಮುಂದೆ ನಿಲ್ಲಲು ಸಿದ್ದರಾಮಯ್ಯಗೆ ಸಾಧ್ಯವೇ ಇಲ್ಲ ಎಂದು ಹೇಳಿದರು.
ತನಿಖೆಗೆ ಆದೇಶಿಸಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರ ಜೊತೆಗೆ, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತನಿಖೆಗೆ ಲೋಕಾಯುಕ್ತಕ್ಕೆ ಆದೇಶಿಸಲಾಗಿದೆ. ಬಿಜೆಪಿಯಿಂದ ಸದನದಲ್ಲಿ ಈ ಕುರಿತು ಹೋರಾಟ ಮಾಡಿದಾಗ, ಇದು ಬಿಜೆಪಿ ಪ್ರೇರಿತ, ಷಡ್ಯಂತ್ರ ಎಂದು ಸಚಿವರು ಆರೋಪ ಮಾಡಿದ್ದರು. ಇದು ತನಿಖೆಗೆ ಸೂಕ್ತ ಎಂದು ಕೋರ್ಟ್ ಹೇಳಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೀಗ ಬೇರೆ ದಾರಿಯಿಲ್ಲ. ಅವರು ಯಾವುದಕ್ಕೆ ಕಾಯುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಬಿಜೆಪಿಯವರು ಪ್ರಕರಣ ದಾಖಲಿಸಿಲ್ಲ. ದೂರು ದಾಖಲಿಸಿದ್ದು RTI ಕಾರ್ಯಕರ್ತರು ಹಾಗೂ ಹೋರಾಟಗಾರರು. ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆ ಎಂದು ಆಪಾದನೆ ಮಾಡಿದ್ದರು. ಈಗ ನ್ಯಾಯಾಲಯಕ್ಕೆ ಯಾವ ರೀತಿಯ ಆಪಾದನೆ ಮಾಡುತ್ತಾರೆ? ಎಂದು ಅಶೋಕ್ ಪ್ರಶ್ನಿಸಿದರು.
ಎರಡೂ ಕೋರ್ಟ್‍ಗಳಲ್ಲಿ ಅವರಿಗೆ ಹಿನ್ನಡೆಯಾಗಿದೆ. ಮೇಲಿನ ಕೋರ್ಟ್‍ಗೆ ಹೋಗುವ ಅವಕಾಶ ಇದ್ದೇ ಇದೆ. ಬಿಜೆಪಿ ಏನೂ ಹೇಳಿಲ್ಲ, ಎಲ್ಲವನ್ನೂ ಕೋರ್ಟ್ ಹೇಳಿದೆ. ಲೋಕಾಯುಕ್ತ ತನಿಖೆಗೆ ವಹಿಸಿರುವುದರಿಂದ ಎಫ್‍ಐಆರ್ ಆಗಲಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾದರೂ ಪೊಲೀಸರು, ಪೊಲೀಸ್ ಇಲಾಖೆಯಡಿಯಲ್ಲೇ ಬರುತ್ತಾರೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿ ಬಿಜೆಪಿಯ ಎಲ್ಲ ಮುಖಂಡರು ನಾಳೆ(ಸೆ.26) ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸಲಿದ್ದೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.