ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯಗೆ ಈ ಚುನಾವಣೆಯಲ್ಲಿ ಗರ್ವಭಂಗ ಆಗಬೇಕು : ಎಚ್.ಡಿ.ದೇವೇಗೌಡ
"ಜಗಮೆಚ್ಚಿದ ನಾಯಕ ಮೋದಿ ಬಗ್ಗೆ ಲಘುವಾಗಿ ಮಾತನಾಡಿರುವ ಸಿದ್ದರಾಮಯ್ಯಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು"
ಬೆಂಗಳೂರು: ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಮಂತ್ರಿ, ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯ ಅವರ ಗರ್ವಭಂಗ ಈ ಲೋಕಸಭಾ ಚುನಾವಣೆಯಲ್ಲಿ ಆಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಗುಡುಗಿದರು.
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ - ಬಿಜೆಪಿ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯಂತಹ ಜಗಮೆಚ್ಚಿದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ ದೇವೇಗೌಡರಿಗೆ ನಿರ್ದೇಶನ ನೀಡಿದರು.
"ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಬಿಡದೇ ಹೋರಾಟ ಮಾಡೋಣ. ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ವೀಕ್ ಅಂತೆ.. ಅಬ್ಬಾ..! ಪ್ರಧಾನಿ ವಿರುದ್ಧವೇ ಕೋರ್ಟಿಗೆ ಹೋಗಿದ್ದಾರೆ. ಎಂಥಾ ಜನ ಇವರು" ಎಂದು ದೇವೇಗೌಡರು ಕಿಡಿಕಾರಿದರು.
"ಸಿದ್ದರಾಮಯ್ಯನವರು ಜೆಡಿಎಸ್ ಎಲ್ಲಿದೆ ಅಂತಾರೆ. ಅವರಿಗೆ ಅಧಿಕಾರದ ಮದ. ಆ ಮದ ಇಳಿಸುವ ಸಾಮರ್ಥ್ಯ 91ನೇ ವರ್ಷದ ಈ ದೇವೇಗೌಡನಿಗಿದೆ. ಯಾರ ಭಯಕ್ಕೂ ನಾನು ಅಂಜುವನಲ್ಲ. ಆ ಭಯ ಅನ್ನೋದೇ ನನಗಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಗುಡುಗಿದರು
ಎಐಸಿಸಿಗೆ ಹಣ ಸಂದಾಯವಾಗುತ್ತಿದೆ
28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಣ ಬಲವನ್ನು ನಾವು ಎದುರಿಸಬೇಕಿದೆ. ಹೊರ ರಾಜ್ಯಗಳಿಗೂ ಕಾಂಗ್ರೆಸ್ ನವರು ಹಣ ಸರಬರಾಜು ಮಾಡುತ್ತಿದ್ದಾರೆ. ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಇದೆ. ಅಲ್ಲಿಗೆಲ್ಲ ರಾಜ್ಯದ ಹಣ ಹೋಗುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವುದು ಸಂತೋಷದಾಯಕ. ಭಾರತ ಮಾತೆ ಹಾಗೂ ಶ್ಯಾಮ್ ಪ್ರಕಾಶ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಅರ್ಪಿಸಿ ವೇದಿಕೆಗೆ ಬಂದಿದ್ದೇನೆ. ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಾಹಿತಿಯನ್ನು ಬಿಜೆಪಿ ವರಿಷ್ಠರಿಗೆ ನೀಡುತ್ತಿದ್ದಾರೆ. ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸಮಯ ತುಂಬಾ ಕಡಿಮೆ ಇದೆ. ಹಿಂದೆ ಆದಂತಹ ವಿಚಾರಗಳನ್ನ ಮರೆತು ನಾವೆಲ್ಲಾ ಒಂದಾಗಬೇಕಿದೆ. ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು ಅವರು.