ಸಿದ್ದರಾಮಯ್ಯರ ರಾಜಕೀಯ ತಂತ್ರಗಾರಿಕೆ ಮೆಚ್ಚಲೇಬೇಕು: ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ
ಬೆಂಗಳೂರು, ಜು. 17: ‘ತಮ್ಮ ವಿಚಾರಧಾರೆಗಳನ್ನು ಜನ ಒಪ್ಪುವ ರೀತಿಯಲ್ಲಿ ಹೇಳುವ ಕಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರಗತವಾಗಿದೆ. ಪ್ರತಿಪಕ್ಷ ಸದಸ್ಯನಾಗಿ ನಾನು ನಿಜಕ್ಕೂ ಅವರನ್ನು ಅಭಿನಂದಿಸುತ್ತೇನೆ’ ಎಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಿಎಂ ಅವರೇ ಗ್ಯಾರಂಟಿ ಯೋಜನೆಗಳ ಪುಷ್ಪಕ ವಿಮಾನವನ್ನೇ ಏರಿ ಅಧಿಕಾರಕ್ಕೆ ಬಂದಿದ್ದೀರಿ. ರಾಜಕೀಯದಲ್ಲಿ ನೀವು ಮಾಡಿದ ತಂತ್ರ ಯಾರೂ ಮಾಡಲು ಸಾಧ್ಯವಿಲ್ಲ. ನಿಮ್ಮ ತಂತ್ರಗಾರಿಕೆಯನ್ನು ಮೆಚ್ಚಲೇಬೇಕು ಎಂದು ಶ್ಲಾಘಿಸಿದರು.
‘ನಿಮ್ಮ ಸಾಧನೆಯನ್ನು ಆಧರಿಸಿ ಮತಯಾಚಿಸುವ ಬದಲು ಗ್ಯಾರಂಟಿ ಕಾರ್ಡ್‍ಗಳ ಮೂಲಕ ಆಮಿಷವೊಡ್ಡಿ ಮತ ಕೇಳಿದ್ದೀರಾ? ಆಯವ್ಯಯದ ಅಂಕಿ-ಅಂಶಗಳು ಜನರಿಗೆ ಮೋಸ ಮಾಡುವಂತಿವೆ. ರಾಜ್ಯದ ಅಭಿವೃದ್ಧಿಯನ್ನು ಮತ್ತು ಜನರ ಹಿತವನ್ನು ಬಲಿಕೊಟ್ಟು ಅಧಿಕಾರಕ್ಕೆ ಬಂದಿದ್ದೀರಿ. ಇದು ಜನರಿಗೆ ಮಾಡಿದ ವಂಚನೆ’ ಎಂದು ಆರಗ ಜ್ಞಾನೇಂದ್ರ ದೂರಿದರು.
ಹಿಂದಿನ ಸರಕಾರದ ಆವ್ಯವ್ಯಯವನ್ನು ಟೀಕಿಸಿದ್ದು, ಕೇಂದ್ರ ಸರಕಾರ ದೇಶವನ್ನು ಹಾಳು ಮಾಡಿದೆ ಎಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಾರು ಈ ರೀತಿಯ ಬಜೆಟ್ ಮಂಡಿಸಿರಲಿಲ್ಲ. ಇದು ಬಜೆಟ್ ಪಾವಿತ್ರ್ಯತೆಗೆ ತೀಲಾಂಜಲಿ ನೀಡಿದ್ದು, ಸರಿಯಲ್ಲ’ ಎಂದು ಆಕ್ಷೇಪಿಸಿದ ಅವರು, ‘ದೇಶ ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದ್ದರೆ ಅದಕ್ಕೆ ಬಿಜೆಪಿ ಸರಕಾರಗಳ ದೂರದೃಷ್ಟಿಗಳೇ ಕಾರಣ’ ಎಂದು ವಿಶ್ಲೇಷಿಸಿದರು.
ಜಟಾಪಟಿ: ಆಯವ್ಯಯದಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಕಡಿಮೆ ಮಾಡಿ, ಗ್ಯಾರಂಟಿ ಯೋಜನೆಗಳ ಜಾರಿಗೆ ಹೆಚ್ಚಿನ ಹಣಕಾಸನ್ನು ಒದಗಿಸಿದ್ದು ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಕ್ಕೆ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ಡಾ.ಪರಮೇಶ್ವರ್ ಆಕ್ಷೇಪಿಸಿದರು. ಈ ವೇಳೆ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದವೂ ನಡೆಯಿತು.