ಜ.5ರಿಂದ 3 ದಿನಗಳ ಕಾಲ ‘ಸಿರಿಧಾನ್ಯ ಮೇಳ’: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜ.5ರಿಂದ 7ರ ವರೆಗೆ ಮೂರು ದಿನಗಳ ಕಾಲ ‘ಸಿರಿಧಾನ್ಯ ಮತ್ತು ಸಾವಯವ ಅಂತರ್ ರಾಷ್ಟ್ರೀಯ ವಾಣಿಜ್ಯ ಮೇಳ’ ವನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಫ್ತುದಾರರ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿಯನ್ನು ರಾಜ್ಯದಲ್ಲಿ 2 ದಶಕಗಳಿಂದ ಉತ್ತಮ ಪರ್ಯಾಯ ಪದ್ಧತಿಯಾಗಿ ಉತ್ತೇಜಿಸಲಾಗುತ್ತಿದೆ. ಸ್ವಾವಲಂಬನೆ ಗ್ರಾಮೀಣಾಭಿವೃದ್ಧಿ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಲು 2004ರಲ್ಲಿಯೇ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತಂದು ಸಾವಯವ ಕೃಷಿ ಉತ್ತೇಜನ ನೀಡಲಾಗುತ್ತಿದೆ ಎಂದರು.
‘ಸಿರಿಧಾನ್ಯಗಳು ಬಹುಉಪಯೋಗಗಳನ್ನು(ಆಹಾರ, ಮೇವು, ಇಂಧನ) ಹೊಂದಿದ್ದು, ಸಾಮಾನ್ಯವಾಗಿ ಬರಗಾಲದ ಸಮಯದಲ್ಲಿ ಕೊನೆಯ ಬೆಳೆಯಾಗಿ ರೈತರಿಗೆ ಉತ್ತಮ. ಅಪಾಯ ನಿರ್ವಹಣೆ ತಂತ್ರವಾಗಿದೆ. ಸಿರಿಧಾನ್ಯಗಳು ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿರುತ್ತವೆ. ಕಡಿಮೆ ನೀರಿನಲ್ಲಿ, ಅತ್ಯಂತ ಶುಷ್ಕ ವಾತಾವರಣದಲ್ಲಿಯೂ ಬದುಕಬಲ್ಲವು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಶಕ್ತಿಯನ್ನು ಹೊಂದಿರುತ್ತವೆ ಎಂದು ಅವರು ತಿಳಿಸಿದರು.
ಸಾವಯವ ಮತ್ತು ಸಿರಿಧಾನ್ಯಗಳನ್ನು ‘ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ’ ಎಂದು ಜನಪ್ರಿಯಗೊಳಿಸುವುದು ಸರಕಾರದ ಧ್ಯೇಯ. ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ 15.61ಲಕ್ಷ ಹೆಕ್ಟೇರ್, ಪ್ರಮುಖವಾಗಿ ರಾಗಿ, ಜೋಳ, ಸಜ್ಜೆ, ಹಾರಕ, ನವಣೆ, ಸಾಮೆ, ಊದಲು, ಕೊರಲು, ಬರಗು ಮುಂತಾದ ಸಿರಿ ಮತ್ತು ತೃಣದಾನ್ಯಗಳನ್ನು ಬೆಳೆಯಲಾಗುತ್ತಿದೆ ಎಂದರು.
ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ರೈತರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸಲು ಮೇಳವನ್ನು ಏರ್ಪಡಿಸಲಾಗಿದೆ. ಮೇಳದ ಆಯೋಜನೆಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯು ಮೇಳ ಆಯೋಜನೆಯ ನೋಡಲ್ ಏಜೆನ್ಸಿಯಾಗಿರುತ್ತದೆ. ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಜಿಐಜಡ್, ಸಿಎಫ್‍ಟಿಆರ್ ಐ, ಐಐಎಂಆರ್ ಸಂಶೋಧನಾ ಸಂಸ್ಥೆಗಳು ಮೇಳದ ಪಾಲ್ಗೊಳ್ಳಲಿವೆ ಎಂದರು.
ಈ ಮೇಳದಲ್ಲಿ ಉತ್ತರ ಪ್ರದೇಶ, ಪಂಜಾಬ್, ಆಂಧ್ರ, ಮಹಾರಾಷ್ಟ್ರ, ಒಡಿಸ್ಸಾ, ತಮಿಳುನಾಡು ಮತ್ತು ಮೇಘಾಲಯ ಸೇರಿದಂತೆ ಇನ್ನಿತರ ರಾಜ್ಯಗಳು ಪಾಲ್ಗೊಳ್ಳಲಿದ್ದು, 300 ಮಳಿಗೆಗಳನ್ನು ಸ್ಥಾಪಿಸಲಿದೆ. ಈಗಾಗಲೇ 248 ಮಳಿಗೆಗಳು ನೋಂದಣಿಯಾಗಿರುತ್ತವೆ. ರೈತರ ಒಕ್ಕೂಟಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜ.5ರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳವನ್ನು ಉದ್ಘಾಟಲಿಸಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್ ಗೆ 10ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತಿದರಿದ್ದರು.