ಬಿಟ್ ಕಾಯಿನ್ ತನಿಖೆ ನಡೆಸಿದ್ದ ಅಧಿಕಾರಿಗಳ ಮನೆ ಮೇಲೆ ಎಸ್ಐಟಿ ದಾಳಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.7: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ತನಿಖೆ ಚುರುಕಾಗಿದ್ದು, ಪ್ರಸಕ್ತ ಈ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ಕೈಗೊಂಡಿದೆ. ಈ ಮೊದಲು ಸಿಸಿಬಿ ತನಿಖೆ ನಡೆಸಿತ್ತು. ಹೊಸ ಬೆಳವಣಿಗೆಯಲ್ಲಿ ಈ ಹಗರಣದ ಸಿಸಿಬಿ ತನಿಖೆಯ ವೇಳೆ ಮುಂದಾಳತ್ವ ವಹಿಸಿದ್ದ ಐವರು ಅಧಿಕಾರಿಗಳ ಮನೆ ಮೇಲೆ ಶನಿವಾರ ಎಸ್ಐಟಿ ದಾಳಿ ನಡೆಸಿದೆ.
ತುಮಕೂರು ರಸ್ತೆಯ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ನ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರ್ ಅವರ ನಿವಾಸ, ಬೊಮ್ಮನಹಳ್ಳಿ ಸೋಲಾಪುರಿಯ ಅಪಾರ್ಟ್ಮೆಂಟ್ನ ಸೈಬರ್ ಎಕ್ಸ್ಪರ್ಟ್ ಸಂತೋμï ಅವರ ನಿವಾಸ, ರಾಮಮೂರ್ತಿ ನಗರದಲ್ಲಿ ವಾಸವಿರುವ ಇನ್ಸ್ಪೆಕ್ಟರ್ ಚಂದ್ರಾಧರ್ ಅವರ ನಿವಾಸ ಹಾಗೂ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ಅವರ ನಿವಾಸ ಸೇರಿ ಐವರು ಅಧಿಕಾರಿಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿರುವ ಲ್ಯಾಪ್ ಟಾಪ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಷ್ಟೇ ಅಲ್ಲದೆ ಓರ್ವ ಖಾಸಗಿ ವ್ಯಕ್ತಿ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದ್ದ ಬಿಟ್ ಕಾಯಿನ್ ಹಗರಣದ ಬಗ್ಗೆ ಇದೀಗ ಹೊಸ ತನಿಖೆ ನಡೆಸಲು ಕಾಂಗ್ರೆಸ್ ಸರಕಾರ ಆದೇಶ ನೀಡಿದೆ. ತನಿಖೆ ನಡೆಸುತ್ತಿರುವ ಎಸ್ಐಟಿ ಈಗ ಈ ಹಿಂದೆ ತನಿಖೆ ನಡೆಸಿದ ಸಿಸಿಬಿ ಪೊಲೀಸರನ್ನೇ ವಿಚಾರಣೆಗೆ ಒಳಪಡಿಸಿರುವುದು ಈ ಅಧಿಕಾರಿಗಳು ಏನಾದರೂ ದಾಖಲೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆಯೇ ಎಂಬ ಗುಮಾನಿ ಮೇಲೆ ಈ ದಾಳಿ ನಡೆದಿದೆ ಎಂಬ ಸಂಶಯ ಕೇಳಿಬಂದಿದೆ.