ಸಕಲ ಸರಕಾರಿ ಗೌರವಗಳೊಂದಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ
ಮಂಡ್ಯ : ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವದೊಂದಿಗೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಹೊರವಲಯದ ಕಾಫಿ ಡೇ ಆವರಣದಲ್ಲಿ ಬುಧವಾರ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವಾರು ಹಾಲಿ, ಮಾಜಿ ಕೇಂದ್ರ, ರಾಜ್ಯ ಸಚಿವರು, ಶಾಸಕರು, ಗಣ್ಯರು ಅಗಲಿದ ಹಿರಿಯ ರಾಜಕೀಯ ಮುತ್ಸದ್ದಿಯ ಪಾರ್ಥಿವ ಶರೀರಕ್ಕೆ ಪುಷ್ಟಗುಚ್ಚವಿಟ್ಟು ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನ ಅವರ ನಿವಾಸದಿಂದ ಮಧ್ಯಾಹ್ನ 12ರ ವೇಳೆಗೆ ಪುಷ್ಪಾಲಂಕೃತ ವಾಹನದಲ್ಲಿ ಕರೆತಂದ ಕೃಷ್ಣ ಅವರ ಪಾರ್ಥಿವ ಶರೀರವನ್ನು ಕಾಫಿ ಡೇ ಆವರಣದಲ್ಲಿ ಸಂಜೆ 5 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಹರಿದು ಬಂದ ಜನಸಾಗರ ಅಗಲಿದ ನೆಚ್ಚಿನ ನಾಯಕನ ದರ್ಶನ ಪಡೆದರು.
ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿತು. ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಮೂರು ಬಾರಿ ಕುಶಾಲ ತೋಪು ಮೊಳಗಿತು.
ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ, ಪುತ್ರಿಯರಾದ ಮಾಳವಿಕ ಸಿದ್ದಾರ್ಥ, ಶಾಂಭವಿ, ಅಳಿಯ ಉನೇಶ್ ಸೇರಿದಂತೆ ಕೃಷ್ಣ ಅವರ ಕುಟುಂಬದ ಅಪಾರ ಬಂಧುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದರು.
ಸಂಸದರಾದ ಬಸವರಾಜ ಬೊಮ್ಮಾಯಿ, ಡಾ.ಸುಧಾಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ, ಡಾ.ಎಂ.ಸಿ.ಸುಧಾಕರ್, ಎನ್.ಚಲುವರಾಯಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಲಕ್ಷ್ಮಿಹೆಬ್ಬಾಳ್ಕರ್, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು, ಶಾಸಕರಾದ ಟಿ.ಬಿ.ಜಯಚಂದ್ರ, ಡಾ.ಸಿ.ಎನ್.ಅಶ್ವತ್ಥನಾರಾಯಣ, ರವಿಕುಮಾರ್ ಗಣಿಗ ಸೇರಿದಂತೆ ಹಲವಾರು ಗಣ್ಯರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.