ಸೌದಿ ಅರೇಬಿಯಾದಲ್ಲಿ ಸ್ನೂಕರ್ ವಿಶ್ವ ಚಾಂಪಿಯನ್ ಶಿಪ್: ದೇಶಕ್ಕೆ ಚಿನ್ನದ ಕೊಡುಗೆ ನೀಡಿದ ಕೋಲಾರದ ಯುವತಿ ಕೀರ್ತನಾ
ಕೋಲಾರ, ಜು.24: ಸೌದಿ ಅರೇಬಿಯಾದಲ್ಲಿ ನಡೆದ ಸ್ನೂಕರ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ಯುವತಿ ಕುಮಾರಿ.ಕೀರ್ತನಾ ಪಾಂಡಿಯನ್ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ, ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಕಂಚು, ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಪಾಂಡಿಯನ್ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಅಂಡರ್ 16ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಹಾಗೂ ಕೆಜಿಎಫ್‌ನಲ್ಲಿರುವ ಕೇಂದ್ರ ಸಾರ್ವಜನಿಕ ಉದ್ದಿಮೆ ಬಿಇಎಂಲ್ ಕಾರ್ಖಾನೆಯ(ಡಿಜಿಎಂ) ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಯ ದ್ವಿತೀಯ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಾಳೆ.
ಕೀರ್ತನಾ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಆಫಿರ‍್ಸ್ ಕ್ಲಬ್‌ನಲ್ಲಿ ಡಿಜಿಎಂ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ಚಿಕ್ಕಂದಿನಿoದಲೇ ತಂದೆಯ ಜೊತೆಗೆ ಕ್ಲಬ್‌ಗೆ ಹೋಗುತ್ತಿದ್ದ ಕೀರ್ತನಾ ತನ್ನ ತಂದೆಯಿoದಲೇ ಪ್ರೇರಣೆ ಪಡೆದು ಸ್ನೂಕರ್‌ನ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ತಂದೆಯೊoದಿಗೆ ಬಿಲಿಯರ್ಡ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದರು.
ತನ್ನ 13ನೇ ವಯಸ್ಸಿಗೇ ಬಾಲ್ ಹೊಡೆಯಲಾರಂಭಿಸಿದ ಕೀರ್ತನಾ 16ನೇ ವಯಸ್ಸಿಗೆ ಹತ್ತನೇ ತರಗತಿ ಓದುತ್ತಿರುವಾಗಲೇ ವಿಶ್ವ ಕಿರಿಯರ ಪಂದ್ಯದಲ್ಲಿ ಕಂಚಿನ ಪದಕ ಗೆದ್ದು ಇಡೀ ದೇಶದ ಗಮನ ಸೆಳೆದಿದ್ದರು. ರಾಷ್ಟ್ರೀಯ, ಮಟ್ಟದಲ್ಲಿ ಇದುವರೆಗೂ ಸುಮಾರು 20ಕ್ಕಿಂತ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರೆ. ಇದೀಗ ಅಂತರಾಷ್ಟ್ರೀಯ, ಮಟ್ಟದಲ್ಲಿ ಚಿನ್ನದ ಕಪ್ ಗೆದ್ದು ಸಾಧನೆ ಮಾಡಿದ್ದಾರೆ.
2017ರಲ್ಲಿ ಚೀನಾದಲ್ಲಿ ನಡೆದ ಅಂಡರ್ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು, 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022ರಲ್ಲಿ ರೋಮೇನಿಯಾದಲ್ಲಿ ಕಂಚು ಗೆದ್ದು ಇದೀಗ ಅಂಡರ್ 21ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್‌ಗಳಲ್ಲಿ ಭಾಗವಹಿಸಬೇಕು, ಏಷಿಯನ್ ಗೇಮ್ಸ್, ಒಲಂಪಿಕ್ಸ್ ಕ್ರೀಡೆಗಳಲ್ಲೂ ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಹೆಬ್ಬಯಕೆ.