‘ಸಾಮಾಜಿಕ, ಆರ್ಥಿಕ ಸಮೀಕ್ಷೆ’ ವೈಜ್ಞಾನಿಕವಾಗಿ ನಡೆಸಲಾಗಿದೆ: ಜಯಪ್ರಕಾಶ್ ಹೆಗ್ಡೆ
ಬೆಂಗಳೂರು, ನ.17: ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ ಜನಗಣತಿ)ಯನ್ನು ಯಾವುದೆ ಶಾಲಾ ಮಕ್ಕಳಿಂದ ತಯಾರು ಮಾಡಿಲ್ಲ. ಸಮೀಕ್ಷೆ ಬಗ್ಗೆ ನಡೆದಿರುವ ಆಪಾದನೆಗಳು ಸತ್ಯಕ್ಕೆ ದೂರವಾದದ್ದು. ವೈಜ್ಞಾನಿಕವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ’ ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿಯೋಗವು ತಮ್ಮನ್ನು ಭೇಟಿ ಮಾಡಿ ಎಚ್. ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿ ತಿರಸ್ಕರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಂದ ವರದಿಯನ್ನು ತಯಾರಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ವೈಜ್ಞಾನಿಕವಾಗಿ ತಯಾರಿಸಿದ ಅಂಕಿ ಸಂಖ್ಯೆಯಾಗಿದೆ. ಬಿಇಎಲ್ ಸಂಸ್ಥೆಯ ನೆರವಿನೊಂದಿಗೆ ಈ ವರದಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.
ಈ ವರದಿಯಲ್ಲಿ ಯಾವುದೆ ಸಮಾಜವನ್ನು ಒಡೆಯುವ ಕೆಲಸ ಮಾಡಿಲ್ಲ, ಕಾಂತರಾಜ್ ಆಯೋಗದ ವರದಿಯನ್ನು ಅಧಿಕಾರಿಗಳಿಂದ ಅಂಕಿ ಸಂಖ್ಯೆಗಳನ್ನು ಕಲೆ ಹಾಕಿ ತಯಾರಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾತನಾಡಿ, ಕಾಂತರಾಜ್ ಆಯೋಗ ವರದಿ ಅವೈಜ್ಞಾನಿಕವಾಗಿದೆ. ಶಾಲಾ ಮಕ್ಕಳಿಂದ ಈ ವರದಿಯನ್ನು ತಯಾರಿಸಲಾಗಿದೆ. ನ.25ರೊಳಗೆ ತಾವು ವರದಿ ಸಲ್ಲಿಸುವ ಸಾಧ್ಯತೆ ಇರುವ ಅನುಮಾನವಿದೆ. ಈ ವರದಿ ಸಲ್ಲಿಕೆಯಿಂದ ಒಕ್ಕಲಿಗ ಸಮುದಾಯಕ್ಕೆ ಭಾರಿ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಒಕ್ಕಲಿಗ ಜನಾಂಗದಲ್ಲೂ ಅತ್ಯಂತ ಕಡುಬಡವರು, ಕಾರ್ಮಿಕರು ಸವಲತ್ತು ವಂಚಿತರು ಇದ್ದಾರೆ, ವರದಿ ಸಲ್ಲಿಕೆಯಿಂದ ಕಟ್ಟಕಡೆಯ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಇದರಲ್ಲಿ ಅನೇಕ ಗೊಂದಲಗಳು ಇರುವುದರಿಂದ ತಾವು ಸರಕಾರಕ್ಕೆ ಯಥಾವತ್ತ್ ವರದಿಯನ್ನು ಸಲ್ಲಿಸಬಾರದು ಎಂದು ಅವರು ಮನವಿ ಮಾಡಿದರು.