ಬಳ್ಳಾರಿಯ ರೈತರ ಸಮಸ್ಯೆಗಳಿಗೆ ಪರಿಹಾರ; ರೈತ ಮುಖಂಡರ ನಿಯೋಗಕ್ಕೆ ಸಿ ಎಂ ಸಿದ್ದರಾಮಯ್ಯ ಭರವಸೆ
ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಭೆ
ಬೆಂಗಳೂರು, ಆಗಸ್ಟ್ 22- ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಓ.ಟಿ.ಎಸ್. (One Time Settlement) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್ ಹಾಗೂ ಪ್ರವರ್ತಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ಬಿ.ಆರ್. ಪಾಟೀಲ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ರೈತ ಮುಖಂಡರ ನಿಯೋಗದೊಂದಿಗೆ ಈ ಸಮಸ್ಯೆ ಕುರಿತು ಚರ್ಚೆ ನಡೆಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆ ಸಾಲ ಪಡೆದ ರೈತರು, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ ದಂತಹ ಸಮಸ್ಯೆಗಳಿಂದಾಗಿ ಸಕಾಲದಲ್ಲಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸಾಲ ಮರುಪಾವತಿಗೆ ನೋಟೀಸು, ಲೀಗಲ್ ನೋಟೀಸುಗಳನ್ನು ಕಳುಹಿಸಿ, ಅದರ ವೆಚ್ಚವನ್ನೂ ರೈತರ ಮೇಲೆಯೇ ಹಾಕುತ್ತಿದ್ದಾರೆ. ಇಂತಹ ಕ್ರಮಗಳಿಂದಾಗಿ 30,000 ರೂ. ಮೊತ್ತದ ಸಾಲಕ್ಕೆ 2.8 ಲಕ್ಷ ರೂ. ಪಾವತಿಸುವಂತೆ, 3 ಲಕ್ಷ ರೂ. ಸಾಲಕ್ಕೆ 3೦ ಲಕ್ಷ ರೂ. ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಪ್ರತಿಭಟಿಸಿ, 8 ತಿಂಗಳಿನಿಂದ ರೈತ ಹೋರಾಟಗಾರರು ಧರಣಿ ನಡೆಸುತ್ತಿದ್ದಾರೆ. ರೈತರು ಓ.ಟಿ.ಎಸ್. ಅಡಿ ಶೇ. 50 ರಷ್ಟು ಅಸಲು ಪಾವತಿಸಲು ಸಿದ್ಧರಿದ್ದಾರೆ. ರೈತರ ಸಮಸ್ಯೆ ಬಗೆಹರಿಸಿ, ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಹಲವು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಈ ಅನುಕೂಲ ಕಲ್ಪಿಸಿವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಅಧಿಕಾರಿಗಳು, ಬ್ಯಾಂಕಿನ ಆಡಳಿತ ಮಂಡಳಿ ಇದಕ್ಕೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕಿನಲ್ಲಿ 6500 ಕೋಟಿ ರೂ. ಸುಸ್ತಿ ಸಾಲವಿದ್ದು, ಅದರಲ್ಲಿ 5000 ಕೋಟಿ ರೂ. ಬೆಳೆ ಸಾಲವಾಗಿದೆ ಎಂದರು. ಬ್ಯಾಂಕಿನ ಅಧ್ಯಕ್ಷರು ಗೈರು ಹಾಜರಾದ ಕುರಿತು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರೈತರ ಕುರಿತು ಮಾನವೀಯತೆಯಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರಲ್ಲದೆ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಿಸಿದ ಬ್ಯಾಂಕರುಗಳ ಸಭೆ ನಡೆಸಿದ ಪರಿಹಾರ ಸೂತ್ರ ಕಂಡುಕೊಂಡ ನಂತರ ಮತ್ತೊಮ್ಮೆ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಮಾಧವರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಝಾನ್ಸಿಲಕ್ಷ್ಮಿ, ಟಿ.ಯಶವಂತ್, ಅಲಿಬಾಬ ಸೇರಿ ಹಲವು ರೈತ ಮುಖಂಡರು ಭಾಗವಹಿಸಿದ್ದರು.