ಸೋನಿಯಾ, ರಾಹುಲ್ ಗಾಂಧಿ ದೇಶದ ಜನರಲ್ಲಿ ಕ್ಷಮೆ ಕೇಳಲಿ : ಆರ್.ಅಶೋಕ್ ಆಗ್ರಹ
ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಬಿಜೆಪಿಯಿಂದ ಪೋಸ್ಟರ್ ಅಭಿಯಾನ
ಬೆಂಗಳೂರು : ʼಕಾಂಗ್ರೆಸ್ ಪಕ್ಷ ದೇಶ ವಿರೋಧಿ ಮತ್ತು ಸಂವಿಧಾನದ ವಿರೋಧಿ. ಇಂತಹ ಪಕ್ಷ ಇವತ್ತು ದೇಶದ ಮುಂದೆ ತಲೆಬಾಗಿ ಕೈಕಟ್ಟಿಕೊಂಡು ತುರ್ತು ಪರಿಸ್ಥಿತಿ ಸಂಬಂಧ ದೇಶಕ್ಕೆ ದ್ರೋಹ ಬಗೆದಿದ್ದೇವೆ, ಸಂವಿಧಾನಕ್ಕೆ ಅಪಚಾರ ಮಾಡಿದ್ದೇವೆ’ ಎಂಬುದಾಗಿ ಒಪ್ಪಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದರು.
ಭಾರತದ ಮೇಲೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಈ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ, ಸ್ವಾತಂತ್ರ್ಯ ಉದ್ಯಾನವನದ ಬಳಿ ಸೋಮವಾರ ಏರ್ಪಡಿಸಿದ್ದ ಪೋಸ್ಟರ್ ಅಭಿಯಾನದ ಸಂದರ್ಭದಲ್ಲಿ ಅವರು ಮಾತನಾಡಿದರು.
"ಬಿಜೆಪಿಯ ನಾವು ಸಂವಿಧಾನ ಬದಲಿಸಿದ್ದಾಗಿ ಹೇಳುತ್ತಾರೆ. ನಾವೇನೂ ಬದಲಾವಣೆ ಮಾಡಿಲ್ಲ. ಮಾಡದೇ ಇದ್ದರೂ ನಮ್ಮ ಮೇಲೆ ಅಪವಾದ ಹೊರಿಸುತ್ತಾರೆ. ಸಂವಿಧಾನಕ್ಕೆ ಅಪಚಾರ ಬಗೆದವರು, ದ್ರೋಹ ಬಗೆದವರು ಕಾಂಗ್ರೆಸ್ಸಿಗರು" ಎಂದು ಆಕ್ಷೇಪ ವ್ಯಕ್ತಪಡಿಸಿದರು.
ʼಕಾಂಗ್ರೆಸ್ ಪಕ್ಷವು ದೇಶದ ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ರಾಮಲೀಲಾ ಮೈದಾನಕ್ಕೆ ಬಂದು ದೇಶದ ಮುಂದೆ ತಲೆಬಾಗಿ ನಿಂತು, ದೇಶದ ಜನರ ಮುಂದೆ ತಲೆಬಗ್ಗಿಸಿ, ನಾವು ಸಂವಿಧಾನಕ್ಕೆ ಅಪಚಾರ ಮಾಡಿದ್ದಾಗಿ ಕ್ಷಮೆ ಕೇಳಬೇಕುʼ ಎಂದು ಒತ್ತಾಯಿಸಿದರು.
ʼನಾವು ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಂವಿಧಾನ ನಮಗೆ ಭಗವದ್ಗೀತೆ ಇದ್ದಂತೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇಂತಹ ಸಂವಿಧಾನಕ್ಕೆ ಅಪಚಾರ ಬಗೆದ ಪಾಪಿಗಳು ಕಾಂಗ್ರೆಸ್ಸಿಗರುʼ ಎಂದು ದೂರಿದರು.
ಪೋಸ್ಟರ್ ಅಭಿಯಾನದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವಥನಾರಾಯಣ್, ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಕೇಶವಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.