ಜಯನಗರ ಶಾಸಕರ ಆಯ್ಕೆ ಅಸಿಂಧು ಕೋರಿ ಸೌಮ್ಯಾ ರೆಡ್ಡಿ ಅರ್ಜಿ: ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿಗೆ ಹೈಕೋರ್ಟ್ ಸಮನ್ಸ್
ಬೆಂಗಳೂರು, ಆ.24: ಬೆಂಗಳೂರಿನ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಪರಾಜಿತಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಇದೀಗ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿ.ಕೆ.ರಾಮಮೂರ್ತಿ ಸೇರಿದಂತೆ ಪ್ರತಿವಾದಿಗಳಿಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ವಿಜೇತ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಆಯ್ಕೆ ಅಸಿಂಧುಗೊಳಿಸಬೇಕೆಂದು ಕೋರಿ ಸೌಮ್ಯಾ ರೆಡ್ಡಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಯನ್ನು ಸೆ.7ಕ್ಕೆ ನಿಗದಿಪಡಿಸಿದೆ.
ಮತಯಂತ್ರದ ಮತಗಳ ಎಣಿಕೆಯಲ್ಲಿ ತಾನು ಮುನ್ನಡೆ ಸಾಧಿಸಿದ್ದೆ, ಆದರೆ, ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. 827 ಮತಗಳನ್ನು ಪ್ರತಿಬಾರಿ ಮರುಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಪೋಸ್ಟ್ ಮೂಲಕ ಬಂದಿದ್ದ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ.
ಸುಮಾರು 89 ಮತಪತ್ರಗಳಲ್ಲಿ ಅಧಿಕಾರಿಗಳ ಸಹಿ ಇಲ್ಲದಿದ್ದರೂ ಮತ ಎಣಿಕೆಗೆ ಪರಿಗಣಿಸಲಾಗಿದೆ. ಮರು ಪರಿಶೀಲನೆ ವೇಳೆಯೂ 26 ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ. ಹೀಗಾಗಿ ಒಟ್ಟು 827 ಮತಪತ್ರಗಳನ್ನು ಮರುಎಣಿಕೆ ಮಾಡಬೇಕು. ಅಂದು ಮತ ಎಣಿಕೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆ ವಿಡಿಯೋ ಚಿತ್ರೀಕರಣವನ್ನು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.