ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನ | ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್
ಬೆಳಗಾವಿ : ಪ್ರಸಕ್ತ ಸಾಲಿನ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ವಿಧಾನಮಂಡಲದ ಚಳಿಗಾಲ ಅಧೀವೇಶನವನ್ನು ಕಳೆದ ಬಾರಿಯಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದರು.
ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಯಾವುದೇ ರೀತಿಯ ಅನಾನೂಕುಲವಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು.
ಅಧಿವೇಶನಕ್ಕೆ ಬರುವಂತಹ ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿಗಳು, ಚಾಲಕರಿಗೆ ಹಾಗೂ ಪೊಲಿಸ್ ಅಧಿಕಾರಿ ಸಿಬ್ಬಂದಿಗಳಿಗೆ ವ್ಯವಸ್ಥಿತ ವಸತಿ, ಊಟೋಪಹಾರದ ವ್ಯವಸ್ಥೆಯಾಗಬೇಕು. ಸುವರ್ಣ ವಿಧಾನಸೌಧದ ಪ್ರವೇಶದ್ವಾರದಲ್ಲಿ ಜನ ಹಾಗೂ ಸಂಚಾರ ದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರತಿಭಟನಾ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ ನಿರಂತರವಾಗಿ ನಿಗಾವಹಿಸಲು ಖಾದರ್ ತಿಳಿಸಿದರು.
ಅಧಿವೇಶನದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಲಾಪಗಳ ವೀಕ್ಷಣೆಗೆ ಆಗಮಿಸುವ ಶಾಲೆಗಳ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಕಾಯುವಿಕೆ ಸಮಯದಲ್ಲಿ ಮಕ್ಕಳಿಗೆ ನೆರಳಿನ ವ್ಯವಸ್ಥೆ ಮಾಡಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಅಧಿವೇಶನವನ್ನು ಅಚ್ಚುಕಟ್ಟಾಗಿ ಜರುಗಿಸಬೇಕು. ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಅಧಿವೇಶನ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ತಿಳಿಸಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯು ಪ್ರತಿದಿನ ಬೇರೆ ಬೇರೆ ಜಿಲ್ಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಕಾರ್ಯಕ್ರಮಗಳಿಗೆ ಅಕ್ಕಪಕ್ಕದ ಜಿಲ್ಲೆಗಳ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದರು.
ಅಧಿವೇಶನದ ಸಂದರ್ಭದಲ್ಲಿ ಅಂತರ್ಜಾಲ ವ್ಯವಸ್ಥೆಯಲ್ಲಿ ಯಾವುದೇ ಅಡತಡೆ ಆಗದಂತೆ ನೋಡಿಕೊಳ್ಳಬೇಕು. ಶಾಸಕರು, ಸಚಿವರು ವಾಸ್ತವ್ಯ ಮಾಡುವಂತಹ ಹೋಟೆಲ್‍ಗಳಲ್ಲಿ ಸಾರ್ವಜನಿಕರ ಭೇಟಿಗೆ ವ್ಯವಸ್ಥೆ ಮಾಡಬೇಕು. ಈ ಕುರಿತು ಹೊಟೇಲ್ ಮಾಲಕರೊಂದಿಗೆ ಸಭೆ ಜರುಗಿಸಿ ಸೂಕ್ತ ನಿರ್ದೆಶನಗಳನ್ನು ನೀಡಬೇಕು. ಸುವರ್ಣ ವಿಧಾನಸೌಧದಲ್ಲಿ ಶಾಸಕರ ಭವನ ನಿರ್ಮಾಣ ಹಾಗೂ ನಿರಂತರ ನೀರು ಪೂರೈಕೆಗೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಬಸವರಾಜ ಹೊರಟ್ಟಿ ತಿಳಿಸಿದರು.
ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್ ಮಾತನಾಡಿ, ಅಧಿವೇಶನವನ್ನು ವ್ಯವಸ್ಥಿತವಾಗಿ ಜರುಗಿಸುವ ಹಿನ್ನೆಲೆಯಲ್ಲಿ ವಸತಿ, ಆಹಾರ ಹಾಗೂ ಭದ್ರತಾ ಸಮಿತಿಗಳನ್ನು ರಚಿಸಿ ಸಭೆಗಳನ್ನು ಆಯೋಜಿಸಲಾಗಿದೆ. ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರಿಗೆ ಸೂಕ್ತ ವಸತಿ ಹಾಗೂ ಊಟೋಪಹಾರದ ಕಲ್ಪಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೇ ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರಿಗೆ ಹಾಗೂ ಪೊಲಿಸ್ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಸುಮಾರು ನಾಲ್ಕು ಖಾಸಗಿ ಕ್ಯಾಂಟಿನ್‍ಗಳನ್ನು ತೆರೆಯಲಾಗುಗುವುದು ಎಂದು ಅವರು ಹೇಳಿದರು.
ಡಿಸಿಪಿ ರೋಹನ್ ಜಗದೀಶ್ ಮಾತನಾಡಿ, ಕಳೆದ ಅಧಿವೇಶನಕ್ಕೆ ಅಂದಾಜು ಐದು ಸಾವಿರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಚ್ಚುಕಟ್ಟಾದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸಮಾರಂಭದ ಸ್ಥಳಗಳಲ್ಲಿ ಅಗತ್ಯ ಬಂದೋಬಸ್ತ್‌ನೊಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಶಿಕ್ಷಣಾರ್ಥಿ ಐಇಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸುವರ್ಣ ವಿಧಾನಸೌಧ ಸಮರ್ಪಕ ನಿರ್ವಹಣೆ: ಸುವರ್ಣ ವಿಧಾನಸೌಧದಲ್ಲಿರುವ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು ಸೇರಿದಂತೆ ವಿವಿಧ ಅಂಗಸಂಸ್ಥೆಗಳನ್ನು ವೀಕ್ಷಿಸಿ, ವ್ಯವಸ್ಥೆಗಳನ್ನು ಪರಿಶೀಲಿಸಿದ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಭಾಂಗಣ ಸಿಬ್ಬಂದಿಗಳನ್ನು ಮಾತನಾಡಿ, ದೈನಂದಿನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗಿದೆ. ಪ್ರವೇಶ, ಆಸನಗಳ ನಿರ್ವಹಣೆ, ಪ್ರವೇಶ ದ್ವಾರದ ಬ್ಯಾಗೇಜ್ ಸ್ಯಾನರ್ ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ.
ಡಿ.9-20ರ ವರೆಗೆ ಕಲಾಪ ಸಾಧ್ಯತೆ : 'ಉಭಯ ಸದನಗಳ ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನವು ಡಿ.9ರಿಂದ 20ರವರೆಗೆ ನಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ.