ಫೆ.28ರಿಂದ ಮಾ.3ರವರೆಗೆ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ, ಸಾಹಿತ್ಯ ಮೇಳ : ಸ್ಪೀಕರ್ ಯು.ಟಿ.ಖಾದರ್

ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿ ಫೆ.28ರಿಂದ ಮಾರ್ಚ್ 3ರವರೆಗೆ ಪುಸ್ತಕ ಹಾಗೂ ಸಾಹಿತ್ಯ ಮೇಳ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಫೆ.28ರಿಂದ ಮಾ.3ರವರೆಗೆ ಪುಸ್ತಕ ಮೇಳ ಹಾಗೂ ಸಾಹಿತ್ಯ ಮೇಳ ಮಾಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಮೇಳ ಉದ್ಘಾಟನೆ ಮಾಡಲಿದ್ದಾರೆ ಎಂದರು.
ವಿಧಾನಸೌಧದ ಆವರಣದಲ್ಲಿ ಈ ಪುಸ್ತಕ ಹಾಗೂ ಸಾಹಿತ್ಯ ಮೇಳ ನಡೆಸುತ್ತಿರುವುದರಿಂದ ಸಾಹಿತಿಗಳು, ಪುಸ್ತಕಪ್ರಿಯರು, ವಿದ್ಯಾರ್ಥಿಗಳನ್ನು ವಿಧಾನಸೌಧದ ಹತ್ತಿರಗೊಳಿಸಲು ಇದು ಸಹಕಾರಿಯಾಗಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ, ಪುಸ್ತಕ ಬಿಡುಗಡೆ ಹಾಗೂ ಉತ್ತಮ ಪುಸ್ತಕಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.
ಶಾಸಕರು ತಮ್ಮ ನಿಧಿಯಿಂದ ಮೂರು ಲಕ್ಷ ರೂ. ಬಳಸಿ ಪುಸ್ತಕ ಖರೀದಿಸಿ ಅವರ ಕ್ಷೇತ್ರದ ಲೈಬ್ರರಿಗೆ ಕೊಡಬಹುದಾಗಿದೆ. ಕಡಿಮೆ ದರದಲ್ಲಿ ಪುಸ್ತಕ ಸಿಗುವಂತೆ ಮಾಡಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.
ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಮುದ್ರಣದವರು ಸೇರಿ ಯಾವೆಲ್ಲ ಪುಸ್ತಕಗಳು, ಸಂವಾದ, ಗೋಷ್ಠಿಗಳನ್ನು ಮಾಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಯು.ಟಿ.ಖಾದರ್ ವಿವರಿಸಿದರು.
ಪುಸ್ತಕ ಮೇಳದ ಜೊತೆ ಆಹಾರ ಮೇಳ: ಪುಸ್ತಕ ಮೇಳದ ಜೊತೆಗೆ ಆಹಾರ ಮೇಳವನ್ನೂ ವಿಧಾನಸೌಧದಲ್ಲಿ ಆಯೋಜಿಸಲಾಗುವುದು. ಸಂಜೆ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪುಸ್ತಕ ಮೇಳಕ್ಕೆ ಬಂದವರಿಗೆ ಆಹಾರ ಮೇಳವನ್ನೂ ಆಯೋಜಿಸಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಸಾರ್ವಜನಿಕರಿಂದ ಪುಸ್ತಕ ಮೇಳದ ಲಾಂಛನ ವಿನ್ಯಾಸ ಆಹ್ವಾನ: ಪುಸ್ತಕ ಮೇಳಕ್ಕೆ ಸಂಬಂಧಿಸಿದ ಲಾಂಛನವನ್ನು ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದ್ದು, ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಆಯ್ಕೆಗೊಳ್ಳುವ ಲಾಂಛನದ ವಿನ್ಯಾಸಕರಿಗೆ ಗೌರವಪೂರ್ವಕವಾಗಿ ಬಹುಮಾನವನ್ನು ನೀಡಲಾಗುವುದು. ಆಸಕ್ತರು ಪುಸ್ತಕ ಮೇಳಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ ತಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆ, ಮುಂತಾದ ವಿವರಗಳೊಂದಿಗೆ ಫೆಬ್ರವರಿ 3ರರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಕೊಠಡಿ ಸಂಖ್ಯೆ:121, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು ಎಂದು ಯು.ಟಿ.ಖಾದರ್ ಕೋರಿದರು.