ಸೌಹಾರ್ದತೆ ಕಾಪಾಡಿದರೆ ಕರಾವಳಿ ಮತ್ತಷ್ಟು ಅಭಿವೃದ್ಧಿ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಸೌಹಾರ್ದತೆ ಕಾಪಾಡಿಕೊಂಡರೆ, ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬಹಳಷ್ಟು ಕುದ್ರು, ದ್ವೀಪಗಳಿವೆ. ಹಲವು ವರ್ಷಗಳ ಹಿಂದೆ ಇಲ್ಲಿನ ಒಂದೆರಡು ಎಕರೆ ಜಾಗವನ್ನು ಇತರರಿಗೆ ಮಂಜೂರು ಮಾಡಲಾಗಿದೆ. ಅಲ್ಲಿ ಯಾರು ವಾಸ ಮಾಡುತ್ತಿಲ್ಲ. ಹಾಗಾಗಿ, ಈ ಜಾಗಕ್ಕೆ ಪರಿಹಾರ ನೀಡಿ, ಮರು ಸ್ವಾದೀನ ಪಡಿಸಿಕೊಂಡರೆ, ಅಲ್ಲಿ ಸ್ಟಾರ್ ಹೋಟೆಲ್‍ಗಳನ್ನು ನಿರ್ಮಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬಹುದು ಎಂದರು.
ಆಗ ಪ್ರವಾಸೋದ್ಯಮ ಸಚಿವ ಸಚಿವ ಎಚ್.ಕೆ.ಪಾಟೀಲ್, ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ನಾಯರ್ ಕುದ್ರು ಸೇರಿದಂತೆ ಇತರ ದ್ವೀಪಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಇದಕ್ಕೆ ಯು.ಟಿ.ಖಾದರ್ ದನಿಗೂಡಿಸಿ ಪಾವರೂಲಿ ತೂಗು ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಸದಸ್ಯರ ಸಲಹೆಯಂತೆ ಮಂಜೂರಾಗಿರುವ ಭೂಮಿಯನ್ನು ಹಿಂಪಡೆಯಲು ಪರಿಶೀಲನೆ ನಡೆಸುವುದಾಗಿ ಹೇಳಿದರು.