ಮಕ್ಕಳು-ಬಾಣಂತಿಯರ ಪೌಷ್ಠಿಕ ಆಹಾರಗಳ ಕಿಟ್ ದುಬರ್ಳಕೆ | ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಠಿಕಾಂಶ ಆಹಾರಗಳ ಕಿಟ್‍ಗಳನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದರು.
ಹುಬ್ಬಳ್ಳಿ ನಗರದಲ್ಲಿನ ವಿವಿಧ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾಗಿದ್ದ ಪೌಷ್ಠಿಕ ಆಹಾರಗಳ ಕಿಟ್‍ಗಳನ್ನು ಸಂಗ್ರಹಿಸಿಟ್ಟುಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಗಮನ ಸೆಳೆದರು.
ಈ ಸೂಚನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡುವ ವೇಳೆ ಮಧ್ಯಪ್ರವೇಶ ಮಾಡಿ ಸ್ಪೀಕರ್ ಮಾತನಾಡಿದರು.
ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಠಿಕಾಂಶ ಆಹಾರಗಳ ಕಿಟ್‍ಗಳ ದುರುಪಯೋಗ ಪ್ರಕರಣದ ಬಗ್ಗೆ ಸರಕಾರದ ಶೂನ್ಯ ಸಹಿಷ್ಣುತೆ ಹೊಂದಿದೆ. ಬಿಜೆಪಿ ಸದಸ್ಯರ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೆಲ್ಲ ದಾಖಲೆಗಳು ಇವೆಯೋ ಅವುಗಳನ್ನು ನೀಡಿದರೆ ತನಿಖೆ ಮಾಡಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ 36 ಜನರನ್ನು ಬಂಧಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹೇಶ್ ಟೆಂಗಿನಕಾಯಿ, 36 ಅಲ್ಲ 32 ಜನರ ಬಂಧನ ಮಾತ್ರ ಆಗಿದೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ ಎಂದರು.