ಗದ್ದಲದ ನಡುವೆ ಸ್ಪೀಕರ್ ಯು.ಟಿ.ಖಾದರ್ ರೂಲಿಂಗ್
ಬೆಂಗಳೂರು, ಜು.11: ಜೈನ ಮುನಿಗಳ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದಕ್ಕೆ ಸ್ಪೀಕರ್ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ನಿಮಗೆ ಸದನ ನಡೆಸುವ ಮನಸ್ಥಿತಿ ಇಲ್ಲ. ಅನೇಕ ಹೊಸ ಸದಸ್ಯರು ಸದನದಲ್ಲಿ ಚರ್ಚೆ ಮಾಡಬೇಕು ಎಂದು ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಸದನ ನಡೆಯಬಾರದು ಎಂದು ಕಾರಣಗಳನ್ನು ಹುಡುಕುತ್ತಿದ್ದೀರಾ. ನಿಮಗೆ ನಿಜವಾಗಿಯೂ ಈ ಪ್ರಕರಣದ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಹೇಳಿದರು.
ಸದನದಲ್ಲಿ ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದರಿಂದ, ಸ್ಪೀಕರ್ ಯು.ಟಿ.ಖಾದರ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ನಂತರ ಸದನ ಸೇರಿದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು.
ಗದ್ದಲ ನಡುವೆ ರೂಲಿಂಗ್: ಸದನದಲ್ಲಿ ಗದ್ದಲ ನಡೆಯುತ್ತಿರುವಾಗಲೆ ಶೂನ್ಯವೇಳೆಗೆ ಸಂಬಂಧಿಸಿದಂತೆ ರೂಲಿಂಗ್ ನೀಡಿದ ಸ್ಪೀಕರ್ ಯು.ಟಿ.ಖಾದರ್, ಇನ್ನು ಮುಂದೆ ಶೂನ್ಯವೇಳೆಯಲ್ಲಿ ನಿಯಮಾವಳಿಗೆ ಒಳಪಟ್ಟು ಮಾತ್ರ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಶೂನ್ಯವೇಳೆ ವ್ಯಾಪ್ತಿಗೆ ಬಾರದಿರುವ ವಿಷಯಗಳ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದರು.
ಸಿಎಜಿ ವರದಿ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಎಜಿ ವರದಿ ಮಂಡನೆ ಮಾಡಿದರು. ಬಳಿಕ 22 ಗಮನ ಸೆಳೆಯುವ ಸೂಚನೆಗಳ ಪೈಕಿ 17 ಅನ್ನು ಮಂಡಿಸಿ, ಸದನವನ್ನು ನಾಳೆ ಬೆಳಗ್ಗೆ 10.30ಕ್ಕೆ ಸೇರುವಂತೆ ಸ್ಪೀಕರ್ ಮುಂದೂಡಿದರು.