ವಕ್ಫ್ ಆಸ್ತಿ ಒತ್ತುವರಿ ತೆರವು ಪ್ರಕ್ರಿಯೆಗೆ ಚುರುಕು ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಿ, ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಎಲ್ಲ ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 217 ವಕ್ಫ್ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ ಎಂದು ತಿಳಿಸಿದರು.
22,581 ವಕ್ಫ್ ಖಾತೆ ಮ್ಯುಟೇಶನ್ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.
2 ಸಾವಿರ ಶಾಲೆ ನಿರ್ಮಾಣ: ಬಜೆಟ್‍ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್‍ಆರ್ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಕಾಯ್ದೆ ಪ್ರಕಾರ ಕಳೆದ ಸಾಲಿನಲ್ಲಿ 8,163 ಕೋಟಿ ಕಡ್ಡಾಯವಾಗಿ ಸಿಎಸ್‍ಆರ್ ಅಡಿ ವೆಚ್ಚ ಮಾಡಬೇಕಾಗಿತ್ತು. ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. 1,190 ಕೋಟಿ ಕಳೆದ ವರ್ಷ ಸಿಎಸ್‍ಆರ್ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮಾತ್ರ ಸಿಎಸ್‍ಆರ್ ಅಡಿ ಬಳಸುತ್ತಿವೆ ಎಂದು ಅವರು ವಿವರಿಸಿದರು.
ಶಾಲೆಯಿಂದ ಯಾವ ಮಕ್ಕಳೂ ಹೊರಗುಳಿಯಬಾರದು. ಪ್ರತಿ ವರ್ಷ 6ರಿಂದ 16 ವರ್ಷದೊಳಗಿನ ಮಕ್ಕಳ ಸಮೀಕ್ಷೆಯನ್ನು ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುದೀಕರಣಕ್ಕೆ ನೋಂದಾಯಿಸಿದ ಹಾಗೂ ಬಾಕಿ ಇರುವ ಅರ್ಜಿಗಳ ಶೀರ್ಘ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಗಂಗಾಕಲ್ಯಾಣ ಯೋಜನೆಯಡಿ ಒಟ್ಟು 9,616 ಬೋರ್‍ವೆಲ್ ಕೊರೆಯಲಾಗಿದ್ದು, 4,413 ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 5,203 ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಹಾಗೇ, ಜಿಲ್ಲಾ ಮಟ್ಟದಲ್ಲಿ ಕಾಲೇಜುಗಳು ಹೆಚ್ಚಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ಹೊಸ ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ವಿವರಿಸಿದರು.
ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ಪಿಎಂ ಸ್ವನಿಧಿ ಯೋಜನೆಯಡಿ ಕೇಂದ್ರ ಸರಕಾರ ನಿಗದಿ ಪಡಿಸಿದ ಗುರಿಗಿಂತ ಹೆಚ್ಚಿನ ಸಾಧನೆಯಾಗಿದೆ. ಶೇ.54 ರಷ್ಟು ಮಹಿಳೆಯರು ಸಾಲ ಸೌಲಭ್ಯ ಪಡೆದಿದ್ದಾರೆ. ಅದರಲ್ಲೂ ಉಡುಪಿ, ಕೊಡಗು, ಯಾದಗಿರಿ, ಚಾಮರಾಜನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆಯಾಗಿದೆ ಎಂದು ಅವರು ಉಲ್ಲೇಖಿಸಿದರು.
ಯುವ ನಿಧಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೈಗಾರಿಕೋದ್ಯಮಗಳಲ್ಲಿ ಬೇಡಿಕೆಗೆ ಅನುಗುಣವಾದ ತರಬೇತಿ ನೀಡಿ ಉದ್ಯೋಗ ಒದಗಿಸಲು ಸೂಚಿಸಲಾಗಿದೆ. ಕಲಿಕೆ ಜೊತೆ ಕೌಶಲ್ಯ ಯೋಜನೆಯಡಿ ಕಲಿಯುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರಿಗೆ ಹೆಚ್ಚಿನ ಉದ್ಯೋಗವಾಕಾಶ ಕಲ್ಪಿಸಲಾಗುತ್ತಿದೆ. ಜಿಟಿಟಿಸಿ ಸಂಸ್ಥೆಗಳನ್ನು ಉನ್ನತೀಕರಿಸಿ, ಪ್ರವೇಶಾವಕಾಶವನ್ನು 3000 ದಿಂದ 5,000 ಕ್ಕೆ ಹೆಚ್ಚಿಸಲಾಗಿದೆ ಎಂದೂ ಅವರು ಹೇಳಿದರು.
ಜಿಲ್ಲೆಗಳಲ್ಲಿರುವ ನಸಿರ್ಂಗ್ ಡಿಪ್ಲೋಮಾ ಕಾಲೇಜುಗಳ ಕಾರ್ಯನಿರ್ವಹಣೆಯ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಇವುಗಳನ್ನು ಖುದ್ದು ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಯಿತು.ಇನ್ನೂ, ರಾಜ್ಯದಲ್ಲಿ 2.4 ಕೋಟಿ ಲೀಟರ್ ಪ್ರತಿದಿನ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಪೂರಕವಾಗಿ ಲಸಿಕಾ ಕಾರ್ಯಕ್ರಮವನ್ನು ಸಮಗ್ರವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.