ಕ್ರೀಡಾ ತಾರೆಗಳೇ ಯುವಪೀಳಿಗೆಗೆ ಪ್ರೇರಣೆ: ರಾಜ್ಯಪಾಲರು
ಬೆಂಗಳೂರು: ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸುವ ಕ್ರೀಡಾ ತಾರೆಗಳೇ ಯುವಪೀಳಿಗೆಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ರಾಜಭವನದ ಗಾಜಿನಮನೆಯಲ್ಲಿ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಆಧುನಿಕ ಸೌಲಭ್ಯಗಳು ಮತ್ತು ವಸತಿ ಸೌಕರ್ಯಗಳೊಂದಿಗೆ ‘ಕ್ರೀಡಾ ಕೇಂದ್ರ’ ಸ್ಥಾಪಿಸುವ ಅಗತ್ಯವಿದೆ ಎಂದರು.
ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ 75 ಅತ್ಯುತ್ತಮ ಆಟಗಾರರನ್ನು ಸಿದ್ಧಪಡಿಸುವ ಕರ್ನಾಟಕ ರಾಜ್ಯ ಸರಕಾರದ ಯೋಜನೆಗೆ ಹೆಚ್ಚಿನ ವೇಗ ನೀಡಬೇಕಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಕ್ರೀಡಾ ಸಚಿವ ಬಿ.ನಾಗೇಂದ್ರ, ಕರ್ನಾಟಕ ಒಲಂಪಿಕ್ ಅಸೋಸಿಯೇಶನ್‍ನ ಅಧ್ಯಕ್ಷ ಮತ್ತು ಎಂಎಲ್‍ಸಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಗೋವಿಂದರಾಜ್, ಕ್ರೀಡೆ ಮತ್ತು ಯುವ ಸಬಲೀಕರಣ ಮತ್ತು ಎಸ್ಟಿ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್.ಎನ್, ಆಯುಕ್ತ ಶಶಿಕುಮಾರ.ಎನ್, ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಸಿ.ಪ್ರಭಾಕರ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು ಮತ್ತು ಖಜಾಂಚಿ ರಾಜೇಶ್ ಎನ್.ಜಗದಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.