ಶ್ರೀರಾಮುಲು-ಜನಾರ್ದನ ರೆಡ್ಡಿ ಮಧ್ಯೆ ಜಟಾಪಟಿ : ಮನವೊಲಿಕೆಗೆ ಜೆ.ಪಿ.ನಡ್ಡಾ ರಂಗಪ್ರವೇಶ

- ಜನಾರ್ದನ ರೆಡ್ಡಿ/ಶ್ರೀರಾಮುಲು
ಬೆಂಗಳೂರು : ಬಿಜೆಪಿಯಲ್ಲಿನ ಬಣ ರಾಜಕೀಯ ತಾರಕಕ್ಕೇರಿದ್ದು, ರಾಜ್ಯಾಧ್ಯಕ್ಷರ ಹುದ್ದೆ ಗದ್ದಲದ ನಡುವೆ ಇದೀಗ ಬಳ್ಳಾರಿಯ ರೆಡ್ಡಿ ಸಹೋದರರ ನಡುವೆ ಜಟಾಪಟಿ ಆರಂಭವಾಗಿದೆ. ಈ ಮಧ್ಯೆ ಶ್ರೀರಾಮುಲುಗೆ ವರಿಷ್ಠರು ದಿಲ್ಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
‘ನನ್ನನ್ನು ರಾಜಕೀಯವಾಗಿ ತುಳಿಯಲು ರೆಡ್ಡಿ ಪ್ರಯತ್ನಿಸುತ್ತಿದ್ದಾರೆ’ ಎಂದು ಖುದ್ದು ಶ್ರೀರಾಮುಲು ಆರೋಪಿಸಿ ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾತನಾಡಿದ ಜನಾರ್ದನ ರೆಡ್ಡಿ ‘ಶ್ರೀರಾಮುಲು ಬಿಜೆಪಿ ಬಿಟ್ಟು ಹೋಗುವುದಾದರೆ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಸಲ್ಲ’ ಎಂದು ಆಕ್ಷೇಪಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಶ್ರೀರಾಮುಲು ಅವರಿಗೆ ಕರೆ ಮಾಡಿದ್ದು, ಮನವೋಲಿಕೆಗೆ ಮುಂದಾಗಿದ್ದಾರೆ.
ಬಿಜೆಪಿ ಬಿಡುವ ಆಲೋಚನೆ ಇಲ್ಲ: ‘ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳ ಕಾಲ ನನಗೆ ಎಲ್ಲವನ್ನು ಕೊಟ್ಟು ಪಕ್ಷ ಬೆಳೆಸಿದೆ. ಸದ್ಯಕ್ಕೆ ನನಗೆ ಪಕ್ಷ ಬಿಡುವ ಆಲೋಚನೆಯಿಲ್ಲ. ಒಂದು ವೇಳೆ ಅಂತಹ ಸ್ಥಿತಿ ನಿರ್ಮಾಣವಾದರೆ ವರಿಷ್ಠರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಯಾರದೋ ಒಬ್ಬರ ಆಶೀರ್ವಾದದಿಂದ ನಾನು ರಾಜಕೀಯವಾಗಿ ಬೆಳೆದಿಲ್ಲ. ನನ್ನ 40 ವರ್ಷಗಳ ರಾಜಕೀಯದಲ್ಲಿ ಸೋಲು, ಗೆಲುವು, ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ಜನಾರ್ದನ ರೆಡ್ಡಿ ಸಹಕಾರದಿಂದ ಬೆಳೆದವನಲ್ಲ. ಬಿಜೆಪಿ ನನ್ನನ್ನು ಗುರುತಿಸಿ ಬೆಳೆಸಿದೆ. ನನ್ನಲ್ಲಿ ಶಕ್ತಿ ಸಾಮರ್ಥ್ಯ ಇಲ್ಲದೇ ಹೋಗಿದ್ದರೆ ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ಯಾಕೆ ಟಿಕೆಟ್ ನೀಡುತ್ತಿದ್ದರು ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಸಂಡೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ನಾನು ಸಭೆಯಲ್ಲಿ ಅವರಿಗೆ ಉತ್ತರ ಕೊಟ್ಟಿದ್ದೇನೆ ಎಂದು ಅವರು ಅವರು ತಿಳಿಸಿದರು.
ಬಿಜೆಪಿ ಉಸ್ತುವಾರಿ ನನ್ನ ವಿರುದ್ಧ ಆರೋಪ ಮಾಡಿದಾಗ, ಸಭೆಯಲ್ಲಿ ನನ್ನ ಪಕ್ಕ ಕುಳಿತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದು ಮಾತನ್ನು ಆಡದೆ ಇದ್ದದ್ದು ನನಗೆ ಬೇಸರ ಉಂಟು ಮಾಡಿತು. ನಾನು ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಿದವನಲ್ಲ. ಡಿ.ವಿ.ಸದಾನಂದಗೌಡ ಹೊರತುಪಡಿಸಿ ಯಾರೊಬ್ಬರೂ ನನ್ನ ಪರವಾಗಿ ಮಾತನಾಡಿಲ್ಲ ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ರಾಜಕಾರಣಿಗೂ ಅವರದೇ ಆದ ಕಾರ್ಯಕರ್ತರು, ಅಭಿಮಾನಿಗಳು ಇರುತ್ತಾರೆ. ನಾನು ಕೇವಲ ಬಳ್ಳಾರಿಗೆ ಸೀಮಿತವಾಗಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಬಿಜೆಪಿಯನ್ನು ಸಂಘಟಿಸಲು ಶ್ರಮವಹಿಸಿದ್ದೇನೆ. ಶ್ರೀರಾಮುಲು ನನ್ನಿಂದಲೆ ಬೆಳೆದದ್ದು ಎಂದು ಜನಾರ್ದನ ರೆಡ್ಡಿ ಹೇಳುವುದು ಸರಿಯಲ್ಲ. ಬಳ್ಳಾರಿಯಲ್ಲಿ ಬಿಜೆಪಿಗೆ ನೆಲೆ ಇಲ್ಲ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಆಗ ಬಳ್ಳಾರಿಯ 9 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಗೆಲ್ಲಲು ನನ್ನದೇ ಆದ ಶ್ರಮವಿದೆ ಎಂದು ಅವರು ಹೇಳಿದರು.
ಶ್ರೀರಾಮುಲು ಕರೆತರಲು ಡಿಕೆಶಿ ಯತ್ನ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶ್ರೀರಾಮುಲು ನನಗೆ ಸ್ನೇಹಿತ. ಆದರೆ, ಆತ ಶತ್ರುಗಳ ಜೊತೆ ಸೇರಿಕೊಂಡು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಶ್ರೀರಾಮುಲು ಬಿಜೆಪಿ ಬಿಟ್ಟು ಹೋಗುವುದಾದರೆ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಸಲ್ಲ. ಶ್ರೀರಾಮುಲು ಕಾಂಗ್ರೆಸ್ಗೆ ಹೋಗುತ್ತಾರಾ ಅಥವಾ ಬೇರೆ ಕಡೆ ಹೋಗುತ್ತಾರಾ ಅದು ಅವರಿಗೆ ಬಿಟ್ಟ ವಿಚಾರ. ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಶ್ರೀರಾಮುಲುರನ್ನು ಡಿ.ಕೆ.ಶಿವಕುಮಾರ್ ಕರೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಬಳ್ಳಾರಿ ಭಾಗದಲ್ಲಿ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.