ಸುಲಭ ಮತ್ತು ಕೈಗೆಟುಕುವ ದರಗಳಲ್ಲಿ ಮರಳು : ಎಸ್.ಎಸ್.ಮಲ್ಲಿಕಾರ್ಜುನ್
ಎಸ್.ಎಸ್.ಮಲ್ಲಿಕಾರ್ಜುನ್
ಬೆಂಗಳೂರು : ರಾಜ್ಯ ಸರಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರದ ಮರಳು ನೀತಿಯಂತೆ ಈಗಾಗಲೇ ಸಾರ್ವಜನಿಕ ಹಾಗೂ ಸ್ಥಳೀಯ ಸರಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು ಒಂದು, ಎರಡು ಮತ್ತು ಮೂರನೇ ಶ್ರೇಣಿಯ ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ಮೆಟ್ರಿಕ್ ಟನ್ ಮರಳಿನ ಮಾರಾಟ ಬೆಲೆಯನ್ನು 300 ರೂ.ಗಳನ್ನು ನಿಗದಿಪಡಿಸಲಾಗಿದೆ ಮತ್ತು ಸದರಿ ವ್ಯವಸ್ಥೆಯು ಪ್ರಸಕ್ತ ಜಾರಿಯಲ್ಲಿದೆ. ನಾಲ್ಕು, ಐದು ಮತ್ತು ಉನ್ನತ ಶ್ರೇಣಿಗಳ ಹಳ್ಳ, ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್ ಗಳನ್ನು ಸರಕಾರದಿಂದ ಅಧಿಸೂಚಿತ ಸರಕಾರಿ ಸ್ವಾಮ್ಯದ ಸಂಸ್ಥೆಗಳು/ಸರಕಾರಿ ಇಲಾಖೆಗಳಿಗೆ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೆ ರೀತಿ ಸಾರ್ವಜನಿಕ/ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಮರಳು ಬ್ಲಾಕ್ಗಳನ್ನು ವಿಲೇಪಡಿಸುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಈ ನೂತನ ನೀತಿಯಂತೆ ಮರಳು ಬ್ಲಾಕ್ಗಳ ಟೆಂಡರ್ ಅನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರತಿ ಮೆಟ್ರಿಕ್ ಟನ್ ಮರಳು ಏಕ ರೂಪ ಮಾರಾಟ ದರ 850 ರೂ.ಗಳನ್ನು ನಿಗದಿಪಡಿಸಲಾಗಿದೆ. ಸರಕಾರವು ನಿಗದಿಪಡಿಸುವ ಮಾರಾಟ ಬೆಲೆಯ ಮೊತ್ತದ ಶೇ.50 ರಷ್ಟು ಅನ್ನು ‘ಸೀಲಿಂಗ್ ಪ್ರೈಸ್’ ಎಂದು ಹಾಗೂ ‘ಸೀಲಿಂಗ್ ಪ್ರೈಸ್’ನ ನ ಶೇ.60ರಷ್ಟನ್ನು ಕಟ್ ಆಫ್ ಪ್ರೈಸ್ ಎಂದು ನಿಗದಿಪಡಿಸಲಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸೀಲಿಂಗ್ ಪ್ರೈಸ್ ಮತ್ತು ಕಟ್ ಆಫ್ ಪ್ರೈಸ್ಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್ ಮೊತ್ತವನ್ನು ನಮೂದಿಸಿದವರನ್ನು ಯಶಸ್ವಿ ಬಿಡ್ಡುದಾರರೆಂದು ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚು ಟೆಂಡರ್ ದಾರರು ಏಕ ರೂಪ ಟೆಂಡರ್ ದರವನ್ನು ನಮೂದಿಸಿದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್ಡುದಾರನನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಟೆಂಡರ್ ಪ್ರಕ್ರಿಯೆಯನ್ನು ಇ-ಪೋರ್ಟಲ್ನಲ್ಲಿ ನಡೆಸಲಾಗುತ್ತಿದ್ದು, ಸದರಿ ಪೋರ್ಟಲ್ ಮೂಲಕ ಆಸಕ್ತ ವ್ಯಕ್ತಿ/ಖಾಸಗಿ ಕಂಪನಿ/ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್ ವಿವರಿಸಿದ್ದಾರೆ.
ಈ ಸಂಬಂಧ ಸರಕಾರದಿಂದ ಮಾರ್ಗಸೂಚಿ ಮತ್ತು ಟೆಂಡರ್ ಡಾಕ್ಯುಮೆಂಟ್ ಅನ್ನು ಎಲ್ಲ ಜಿಲ್ಲಾ ಕಚೇರಿಗಳಿಗೆ ನೀಡಲಾಗಿದ್ದು, ಸರಕಾರದಿಂದ ಜಾರಿ ಮಾಡಿರುವ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ನಿರ್ದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಗಣಿ ಇಲಾಖೆಯ ಉಪ ನಿರ್ದೇಶಕ ಮಹಾವೀರ್ ಅವರನ್ನು ಮೊಬೈಲ್ ಸಂಖ್ಯೆ: 9972111002 ಅನ್ನು ಸಂಪರ್ಕಿಸಬಹುದು ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.