2023-24ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟ
ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ
ಸಾಂದರ್ಭಿಕ ಚಿತ್ರ Photo: PTI
ಬೆಂಗಳೂರು: 2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದು, ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉಡುಪಿ ಜಿಲ್ಲೆ 94% ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ದ.ಕ ಜಿಲ್ಲೆ 92.12 ಶೇ. ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆ 88.67% ಫಲಿತಾಂಶದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ 50.59% ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾರೆ.
ಒಟ್ಟು 4.36.138 ವಿದ್ಯಾರ್ಥಿಗಳಲ್ಲಿ (ಬಾಲಕ) 2.87.416 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು 4.23.829 ವಿದ್ಯಾರ್ಥಿನಿಯರಲ್ಲಿ 3.41.778 ಮಂದಿ ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿ 4.93.900 ವಿದ್ಯಾರ್ಥಿಗಳಲ್ಲಿ 35.97.703 ವಿದ್ಯಾರ್ಥಿಗಳು(72.83%) ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3.66.067 ಮಂದಿ(74.17%) ಉತ್ತೀರ್ಣರಾಗಿದ್ದಾರೆ.
625 ಕ್ಕೆ 625 ಅಂಕಿತಾ ಬಸಪ್ಪಾ ಕನ್ನೂರ ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 7 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.
ಫಲಿತಾಂಶವನ್ನು https://karresults.nic.in/ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳೇ ಮೇಲುಗೈ: ಎಸೆಸೆಲ್ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳೇ ಈ ಬಾರಿ ಮೇಲುಗೈ ಸಾಧಿಸಿವೆ. ಶೇ.94ರಷ್ಟು ಫಲಿತಾಂಶ ಪಡೆದ ಉಡುಪಿ ಜಿಲ್ಲೆಯು ಪ್ರಥಮ ರ್ಯಾಂಕ್ ಪಡೆದಿದ್ದರೆ, ಶೇ.92.12ರಷ್ಟು ಫಲಿತಾಂಶ ಪಡೆದ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ರ್ಯಾಂಕ್ ಪಡೆದಿದೆ. ಮೂರನೆ ಸ್ಥಾನದಲ್ಲಿ ಕೊಡುಗು, ನಾಲ್ಕನೆ ಸ್ಥಾನದಲ್ಲಿ ಉತ್ತರ ಕನ್ನಡ ಮತ್ತು ಐದನೆ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಶೇ.50.59ರಷ್ಟು ಫಲಿತಾಂಶ ದಾಖಲಿಸಿದ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.