ಕುಮಾರಸ್ವಾಮಿ ಎಷ್ಟು ‘ಪರ್ಸೆಂಟ್’ ಸಂಗ್ರಹಿಸಿ ಚುನಾವಣೆ ಮಾಡಿದ್ದಾರೆ : ಎಸ್.ಟಿ.ಸೋಮಶೇಖರ್
ಕುಮಾರಸ್ವಾಮಿ/ಎಸ್.ಟಿ.ಸೋಮಶೇಖರ್
ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ‘60 ಪರ್ಸೆಂಟ್’ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಮಗನ ಗೆಲುವಿಗಾಗಿ ಸುಮಾರು 100 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಹಾಗಿದ್ದರೆ, ಅವರು ಎಷ್ಟು ಪರ್ಸೆಂಟ್ ಸಂಗ್ರಹಿಸಿ ಚುನಾವಣೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇಂದ್ರದ ಸಚಿವರಾಗಿ ಎಷ್ಟು ಪರ್ಸೆಂಟ್ ಸಂಗ್ರಹ ಮಾಡಿದ್ದಾರೆ. ತಮ್ಮ ಮಗನನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಿಲ್ಲಿಸಿದಾಗ ಎಷ್ಟು ಕೋಟಿ, ರಾಮನಗರ ಚುನಾವಣೆಗೆ ನಿಲ್ಲಿಸಿದಾಗ ಎಷ್ಟು ಕೋಟಿ, ನೀವು ಮಂಡ್ಯದಲ್ಲಿ ಚುನಾವಣೆಗೆ ನಿಂತು ಎಷ್ಟು ಕೋಟಿ ಖರ್ಚು ಮಾಡಿದ್ದೀರಾ ಅನ್ನೋದನ್ನು ಜನತೆಗೆ ತಿಳಿಸಿ ಎಂದು ಕುಮಾರಸ್ವಾಮಿಗೆ ಅವರು ಆಗ್ರಹಿಸಿದರು.
ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬೇಡ. ಕೇಂದ್ರ ಸರಕಾರದಲ್ಲಿ ಉನ್ನತ ಸ್ಥಾನ ಸಿಕ್ಕಿದೆ. ಒಳ್ಳೆಯ ಯೋಜನೆಗಳನ್ನು ರಾಜ್ಯಕ್ಕೆ ತಂದು ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಿ. ಅದನ್ನು ಬಿಟ್ಟು, ವಾರಕ್ಕೊಂದು ಸಲ ರಾಜ್ಯಕ್ಕೆ ಬರೋದು ಪತ್ರಿಕಾಗೋಷ್ಠಿ ಮಾಡೋದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪಗಳನ್ನು ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ ಎಂದು ಸೋಮಶೇಖರ್ ಟೀಕಿಸಿದರು.
ಬಿಜೆಪಿ ಗುಂಪುಗಾರಿಕೆ ಅಸಹ್ಯ: ಬಿಜೆಪಿಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯಿಂದ ಪಕ್ಷದಲ್ಲಿರುವ ಪ್ರಾಮಾಣಿಕರಿಗೆ ಅಸಹ್ಯ ಆಗುತ್ತಿದೆ. ಎಲ್ಲ ಸರಿಹೊಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲ ಬಿಜೆಪಿ ನಾಯಕರು ದಿನದೂಡುತ್ತಿದ್ದಾರೆ, ಆದರೆ ಸರಿಹೋಗದೆ ಇದ್ದರೆ, ಅವರು ತಮ್ಮ ದಾರಿ ತಾವು ನೋಡಿಕೊಂಡು ಕಾಂಗ್ರೆಸ್ ಅಥವಾ ಬೇರೆ ಪಕ್ಷಕ್ಕೆ ಸೇರುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಏನಾಗುತ್ತದೆ, ಕಾಂಗ್ರೆಸ್ ನಲ್ಲಿ ಏನಾಗುತ್ತದೆ ಅನ್ನೋದು ತನಗೆ ಮುಖ್ಯವಲ್ಲ, ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಬೇಕು ಮತ್ತು ಅಲ್ಲಿನ ಸಮಸ್ಯೆಗಳು ನಿವಾರಣೆಯಾಗಬೇಕು, ಅದು ಮಾತ್ರ ತನ್ನ ಗುರಿ ಎಂದು ಸೋಮಶೇಖರ್ ಹೇಳಿದರು.
ಡಿ.ಕೆ.ಶಿವಕುಮಾರ್ ಹಣೆ ಬರಹದಲ್ಲಿ ಮುಖ್ಯಮಂತ್ರಿ ಆಗುವುದು ಬರೆದಿದ್ದರೆ, ಅವರು ಖಂಡಿತವಾಗಿಯೂ ಮುಖ್ಯಮಂತ್ರಿ ಆಗುತ್ತಾರೆ. ಇಲ್ಲ, ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಯೇ ಅಂತಿಮ ಎಂದು ಬರೆದಿದ್ದರೇ ಅವರು ಮುಖ್ಯಮಂತ್ರಿ ಆಗಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದೆ. ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ಹೈಕಮಾಂಡ್ ಹಾಗೂ ಆ ಪಕ್ಷದ ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಸೋಮಶೇಖರ್ ಹೇಳಿದರು.