ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಪಾರ್ಕ್: ಸಚಿವ ಎಂ.ಬಿ.ಪಾಟೀಲ್ ಘೋಷಣೆ
PC : x/@MBPatil
ಬೆಂಗಳೂರು : ‘ದೇಶದ ಸ್ಟಾರ್ಟ್ಅಪ್ ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್ಅಪ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರಕಟಿಸಿದ್ದಾರೆ.
ಗುರುವಾರ ನಗರದಲ್ಲಿ ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ‘ವೆಂಚುರೈಸ್-24’ ಅನಾವರಣಗೊಳಿಸಿ ಮಾತನಾಡಿದ ಅವರು, ‘ಜಪಾನ್, ದಕ್ಷಿಣ ಕೊರಿಯಾಗಳ ಮಾದರಿಯಲ್ಲಿ ಈ ಸ್ಟಾರ್ಟ್ಅಪ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಈ ಪಾರ್ಕ್ನಲ್ಲಿ ನವೋದ್ಯಮಗಳ ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ/ನಿವೇಶನ ಒದಗಿಸಲಾಗುವುದು. ಸಕಲ ಸೌಲಭ್ಯ ಸಜ್ಜಿತ, ಬಳಕೆಗೆ ಸಿದ್ಧವಿರುವ ಕಚೇರಿಗಳು ಇಲ್ಲಿ ಇರಲಿವೆ. ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ ವಿನೂತನ ಆಲೋಚನೆಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರವನ್ನು ಇಲ್ಲಿ ಕಲ್ಪಿಸಿಕೊಡಲಾಗುವುದು ಎಂದರು.
‘ನವೋದ್ಯಮ ಸವಾಲು’-ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಮಧ್ಯೆ ಸಂವಹನ ಒದಗಿಸುವ ಮೂಲಕ ತಯಾರಿಕೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಮಾಡಲಿದೆ. ‘ವೆಂಚುರೈಸ್-24’ ಕಾರ್ಯಕ್ರಮದ ಯಶಸ್ಸಿಗೆ ಟಿಐಇ ಗ್ಲೋಬಲ್ ಜೊತೆಗೆ ಕೈಜೋಡಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ.
ಹೊಸ ಉಪಕ್ರಮಗಳನ್ನು ಪರಿಚಯಿಸುವ, ಮಾರ್ಗದರ್ಶನ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಈ ವರ್ಷದ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು.
ಸಮಾರಂಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ, ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ ಉಪಸ್ಥಿತರಿದ್ದರು.
2.50ಕೋಟಿ ರೂ.ಬಹುಮಾನ: ನವೋದ್ಯಮ ಸವಾಲು-3ಸುತ್ತುಗಳನ್ನು ಒಳಗೊಂಡಿರಲಿದ್ದು, ಈ ಸವಾಲು ಗೆಲ್ಲಲು ಮುಂಚೂಣಿಯಲ್ಲಿ ಇರುವ ನವೋದ್ಯಮಗಳಿಗೆ 2.50ಕೋಟಿ ರೂ.ಮೊತ್ತದ ಬಹುಮಾನ ಹಂಚಲಾಗುವುದು. ಈ ಪ್ರಕ್ರಿಯೆಯು ಆನ್ಲೈನ್ ಅರ್ಜಿ ಸಲ್ಲಿಕೆ, ತೀರ್ಪುಗಾರರಿಗೆ ಆನ್ಲೈನ್ನಲ್ಲಿ ಮಾಹಿತಿ ನೀಡುವ ಮತ್ತು ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ವಿವರಗಳನ್ನು ಪ್ರಸ್ತುತ ಪಡಿಸುವುದನ್ನು ಒಳಗೊಂಡಿರಲಿದ್ದು, ಇದನ್ನು 3ರಿಂದ 4ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ‘ವೆಂಚುರೈಸ್-24’ ವಿಶ್ವದಾದ್ಯಂತ 1ಸಾವಿರಕ್ಕೂ ಹೆಚ್ಚು ಪ್ರವೇಶಗಳನ್ನು ಆಕರ್ಷಿಸುವ ಗುರಿ ಹೊಂದಿದೆ. ಉದ್ಯಮಗಳನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ವಿವಿಧ ಹೂಡಿಕೆದಾರರ ಜೊತೆ ಸಂವಹನಕ್ಕೂ ಇದು ಅವಕಾಶ ಒದಗಿಸಲಿದೆ’ ಎಂದು ಎಂ.ಬಿ.ಪಾಟೀಲ್ ಹೇಳಿದರು.