ಒಂದು ರಾಷ್ಟ್ರೀಯ ಪಕ್ಷದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ಸ್ಪಷ್ಟ ಉದಾಹರಣೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಒಂದು ರಾಷ್ಟ್ರೀಯ ಪಕ್ಷದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ ಹೆಸರು ಕೇಳಿ ಬರುತ್ತಿದ್ದು, ಯಾರು ಅಧ್ಯಕ್ಷರು ಅಂತ ಬಹಿರಂಗವಾಗಿ ಹೇಳಲಿ. ದೆಹಲಿ ವರಿಷ್ಠರು ಒಂದು ಹೆಸರು ಬಿಟ್ಟು ಪ್ಲಸ್ ಮೈನಸ್ ನೋಡಿ ಅದು ಫೇಲ್ ಆಯಿತು ಅಂದ್ರೆ ಮತ್ತೆ ಬೇರೆ ಹೆಸರು ಬಿಟ್ಟು ಪ್ರಯೋಗ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಶೋಭಾ ಕರಂದ್ಲಾಜೆ ಊಹಾಪೋಹ ಅಂತ ಹೇಳಿದ್ದಾರೆ. ರಾಜ್ಯಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನಿಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು
ಕಾಂಗ್ರೆಸ್ ಸರ್ಕಾರಕ್ಕೆ ಏನು ಆಗೋದಿಲ್ಲ. ಆದರೆ ಸಂಕ್ರಾಂತಿ ನಂತರ ಅಲ್ಲೋಲ ಕಲ್ಲೋಲ ಆಗುತ್ತೆ ಅಂತ ಆಶಾಭಾವನೆ ಮೂಡಿಸಿ ಪಕ್ಷ ಬಿಟ್ಟು ಹೋಗುತ್ತಿರುವ ನಾಯಕರನ್ನು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಗಟ್ಟಿಮುಟ್ಟಾಗಿ ಐದು ವರ್ಷ ಇರುತ್ತೆ. 104 ಇದ್ದಾಗಾಲೇ ಏನು ಮಾಡಲು ಆಗಿಲ್ಲ ಈಗ ಏನು ಮಾಡಲು ಸಾಧ್ಯ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು ಸಾಕಷ್ಟು ಬೆಳವಣಿಗೆ ಆಗಿದೆ. ನೂರಾರು ಹಳ್ಳಿಗಳು ಬೆಂಗಳೂರಿಗೆ ಸೇರುತ್ತಿವೆ. ಇದಕ್ಕೆ ಕನಕಪುರ ಹೊರತಾಗಿಲ್ಲ. ಕನಕಪುರ ಬೆಂಗಳೂರು ಗ್ರಾಮೀಣದ ಒಂದು ಭಾಗ. ಸಹಜವಾಗಿ ಕನಕಪುರ ಬೆಂಗಳೂರು ನಗರಕ್ಕೆ ಸೇರಿದೆ ಎನ್ನುವುದರಲ್ಲಿ ಆಶ್ಚರ್ಯಪಡುವಂತಹ ವಿಚಾರ ಏನಿದೆ. ಇದಕ್ಕೆ ವಿಶೇಷ ಕಾಮೆಂಟ್ ಮಾಡುವ ಅವಶ್ಯಕತೆ ಇಲ್ಲ. ಡಿಕೆಶಿ ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಹೊರತು ಜಿಲ್ಲೆಯ ಬಗ್ಗೆ ಹೇಳಿಲ್ಲ ಎಂದರು.
ಡಿಕೆಶಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ. ಈ ರೀತಿ ಹೇಳಿಕೆ ಮುಖಾಂತರ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಎಲ್ಲವನ್ನೂ ರಾಜಕೀಯ ಮಾಡುವುದು ಸ್ಟಾರ್ಟ್ ಆಗಿದೆ. ಇದನ್ನು ಬಿಟ್ಟು ಇಡೀ ವ್ಯವಸ್ಥೆ ಅನುಕೂಲ ಆಗುವುದನ್ನು ನೋಡಬೇಕು ಎಂದರು.
ಕುಮಾರಸ್ವಾಮಿ ಏನೇ ಟಿಕೆ ಮಾಡಿದರು ಅದಕ್ಕೆ ಪುರಾವೆ ಇರಬೇಕು. ಜಾರ್ಜ್ ಮನೆಯಲ್ಲಿ ಸಿದ್ದರಾಮಯ್ಯ ಏನು ಮಾಡಿದರು ಅಂತ ಪ್ರಶ್ನೆ ಮಾಡಿದ್ರೆ ಅದು ಪ್ರಶ್ನೆಯಾಗಿಯೇ ಉಳಿಯಲಿದೆ. ಪೆನ್ ಡ್ರೈವ್ ವಿಚಾರದಲ್ಲಿಯೂ ಇದೆ ಆಯಿತು. ಟೀಕೆ ಮಾಡುವ ಸಲುವಾಗಿ ಟ್ವೀಟ್ ಮಾಡಿದ್ರೆ ಅದರಿಂದ ಏನು ಉಪಯೋಗ ಆಗಲ್ಲ. ಮಾಧ್ಯಮದಲ್ಲಿ ಚರ್ಚೆ ಆಗುತ್ತೆ ಹೊರೆತು ವಾಸ್ತವವಾಗಿ ಏನು ಗೊತ್ತಾಗುವುದಿಲ್ಲ ಎಂದು ಹೇಳಿದರು.