ರಾಜ್ಯ ಸರಕಾರವು ಸಿಆರ್ಪಿಸಿ ಸೆಕ್ಷನ್ 372 ಅಡಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ: ಹೈಕೋರ್ಟ್
ಬೆಂಗಳೂರು, ಅ.3: ಅಪರಾಧ ದಂಡ ಸಂಹಿತೆಯಲ್ಲಿ ಸೆಕ್ಷನ್ 372 ಅಡಿ ರಾಜ್ಯ ಸರಕಾರವು ತಾನೇ ಸಂತ್ರಸ್ತ ಎಂದು ಪರಿಗಣಿಸಿ ಆರೋಪಿಗಳು ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಒಂದೊಮ್ಮೆ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದಾದರೆ ಸೆಕ್ಷನ್ 378ರಡಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಕಡೂರಿನ ಅಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು.
ಸಿಆರ್ಪಿಸಿ ಸೆಕ್ಷನ್ 372 ಆರೋಪಿಯನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಅಥವಾ ಆರೋಪಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಕಡಿಮೆ ಎಂದು ಆಕ್ಷೇಪಿಸಿ ಸಂತ್ರಸ್ತರು ನ್ಯಾಯಾಲಯಗಳು ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶವಾಗಿದೆ.
ಪ್ರಕರಣವನ್ನು ಆಲಿಸಿದ ನ್ಯಾಯಪೀಠವು ಸಿಆರ್ಪಿಸಿ ಕಾಯಿದೆ ಸೆಕ್ಷನ್ 372 ಅಡಿ ಸಂತ್ರಸ್ತರಿಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಸೆಕ್ಷನ್ 378(1) ಮತ್ತು (3)ರಲ್ಲಿ ರಾಜ್ಯ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಲು ಪ್ರತ್ಯೇಕ ಅವಕಾಶವಿದೆ. ಎರಡೂ ಬೇರೆ ಬೇರೆ ಸೆಕ್ಷನ್ಗಳಾಗಿವೆ. ಹೀಗಾಗಿ, ಸಂತ್ರಸ್ತರು ಸೆಕ್ಷನ್ 372 ಅಡಿ ಸಲ್ಲಿಸಬೇಕಾದ ಮೇಲ್ಮನವಿಯನ್ನು ಸರಕಾರ ಸಲ್ಲಿಸಲು ಸಾಧ್ಯವಿಲ್ಲ. ಸರಕಾರ ತಾನೇ ಸೆಕ್ಷನ್ 378 ಅಡಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಆದೇಶಿಸಿತು. ಅಲ್ಲದೆ, ಅದೇ ಕಾರಣಕ್ಕಾಗಿ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿದ್ದ ವಕೀಲ ಎಸ್. ಜಾವೇದ್ ಅವರು ರಾಜ್ಯ ಸರಕಾರ ತಾನೇ ಬಾದಿತ ವ್ಯಕ್ತಿ ಎಂದು ಭಾವಿಸಿ ಸಿಆರ್ಪಿಸಿ ಸೆಕ್ಷನ್ 372 ಅಡಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಆ ವಾದ ಒಪ್ಪಿದ ಪೀಠವು ಅಪರಾಧ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯಗಳ ಆದೇಶಗಳನ್ನು ಪ್ರಶ್ನಿಸಲು ಸಂತ್ರಸ್ತರಿಗೆ ಮತ್ತು ಸರಕಾರಕ್ಕೆ ಅಪರಾಧ ದಂಡ ಸಂಹಿತೆಯ ಬೇರೆ ಬೇರೆ ಸೆಕ್ಷನ್ಗಳಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ, ಅವುಗಳು ಅದೇ ಸೆಕ್ಷನ್ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬೇಕು. ಸರಕಾರ ಸಂತ್ರಸ್ತರಿಗೆ ಲಭ್ಯವಿರುವ ನಿಯಮದಲ್ಲಿ ಮೇಲ್ಮನವಿ ಸಲ್ಲಿಸಲಾಗದು ಎಂದು ಹೇಳಿದೆ.