ಸರಕಾರಿ ನೌಕರರ ತುಟ್ಟಿಭತ್ತೆ ದರ ಶೇ.10.75ಕ್ಕೆ ಪರಿಷ್ಕರಿಸಿ ಹೆಚ್ಚಳ : ರಾಜ್ಯ ಸರಕಾರ ಆದೇಶ
ಬೆಂಗಳೂರು: 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ತೆ ದರಗಳನ್ನು ಪ್ರಸಕ್ತ ಸಾಲಿನ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ.8.50 ರಿಂದ ಶೇ.10.75ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ, ಪರಿಷ್ಕೃತ ತುಟ್ಟಿ ಭತ್ತೆಯ ದರಗಳ ಆರ್ಥಿಕ ಲಾಭವು ಆಗಸ್ಟ್ 1ರಿಂದ ಲಭ್ಯವಾಗುತ್ತದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಈ ಆದೇಶಗಳು ಅನ್ವಯಿಸುತ್ತವೆ. ಸರಕಾರದ ಮತ್ತು ಜಿಲ್ಲಾ ಪಂಚಾಯತ್‍ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‍ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಮತ್ತು ಎನ್‍ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ತೆಯನ್ನು ನಗದಾಗಿ ಪಾವತಿ ಮಾಡಲಾಗುವುದು.
ಈ ಆದೇಶಗಳನ್ವಯ ಪಾವತಿ ಮಾಡಬೇಕಾಗಿರುವ ತುಟ್ಟಿ ಭತ್ತೆ ಬಾಕಿ ಮೊತ್ತವನ್ನು ಪ್ರಸಕ್ತ ಸಾಲಿನ ಡಿಸೆಂಬರ್ ತಿಂಗಳ ವೇತನ ಬಟವಾಡೆಗೂ ಮೊದಲು ಪಾವತಿ ಮಾಡುವಂತಿಲ್ಲ. ತುಟ್ಟಿ ಭತ್ತೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಉಮಾ ಕೆ. ಆದೇಶದಲ್ಲಿ ತಿಳಿಸಿದ್ದಾರೆ.