ಜು.15ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಸರಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ
ಬೆಂಗಳೂರು, ಜು.5: ವಿವಿಧ ಕಾಮಗಾರಿಗಳ ಬಾಕಿ ಇರುವ ಹಣ ಪಾವತಿಗಳನ್ನು ಜು.15ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಬುಧವಾರ ಮಾಧ್ಯಮ ಪ್ರಕಟನೆ ಹೊರಡಿಸಿರುವ ಸಂಘವು, ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕಳೆದ ಸರಕಾರದ ಅವಧಿಯ ಕಾಮಗಾರಿಗಳ ಬಿಲ್ ಪಾವತಿ ಹಾಗೂ ಪಾಲಿಕೆಯ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಹಣ ಪಾವತಿಗಳನ್ನು ತಡೆಹಿಡಿಯಲಾಗಿದ್ದು, ಕೂಡಲೇ ಆ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದೆ.
ಗುತ್ತಿಗೆದಾರರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಿಲ್ ಮೊತ್ತ ಬಿಡುಗಡೆಗೆ ಆಗ್ರಹಿಸಲಾಗಿತ್ತು. ಸಂಘದ ಮನವಿಗೆ ಸ್ಪಂದಿಸಿದ್ದ ಸರಕಾರ ಜೂ.28ರಂದು ಸುತ್ತೋಲೆಯನ್ನೂ ಹೊರಡಿಸಿತ್ತು. ಆದರೆ, ಇದೀಗ ಸುತ್ತೋಲೆ ಹೊರಡಿಸಿ ಒಂದು ವಾರ ಕಳೆದರು ಬಿಲ್ ಮೊತ್ತ ಬಿಡುಗಡೆಯಾಗಿಲ್ಲ. ಒಂದೂವರೆ ತಿಂಗಳಿಂದ ಹಣ ಬಿಡುಗಡೆ ಮಾಡದಿದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘವು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಕಣ್ಣೊರೆಸುವ ತಂತ್ರವನ್ನು ಕೈಬಿಟ್ಟು ಕಾಮಗಾರಿ ಬಿಲ್ ಬಿಡುಗಡೆ ಮಾಡಬೇಕು. ಜು.15ರೊಳಗೆ ಬಿಲ್ ಮೊತ್ತ ಬಿಡುಗಡೆ ಮಾಡದಿದ್ದರೇ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಸಂಘ ತಿಳಿಸಿದೆ.
ಅಧಿಕಾರಿಗಳು ಬಿಲ್‍ಗಳ ನೈಜತೆಯನ್ನು ಪರಿಶೀಲಿಸಿ ನಿಯಮಾನುಸಾರ ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ನೀಡದೆ ಸತಾಯಿಸುವುದು ಜನಪರ ಕಾಳಜಿಯುಳ್ಳ ಸರಕಾರದ ಲಕ್ಷಣವಾಗಿರುವುದಿಲ್ಲ. ಸರಕಾರ ಕೂಡಲೇ ಮತ್ತೊಮ್ಮೆ ಹಣ ಬಿಡುಗಡೆ ಮಾಡಲು ಸೂಚನೆ ನೀಡಬೇಕು ಎಂದು ಸಂಘ ಮನವಿ ಮಾಡಿದೆ.