ಹಿಜಾಬ್ ನಿಷೇಧ ಹಿಂಪಡೆಯುವ ಹೇಳಿಕೆ: ಸಿಎಂ ಸಿದ್ದರಾಮಯ್ಯ ʼಹುಚ್ಚು ದೊರೆʼ ಎಂದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಹಿಜಾಬ್ ನಿಷೇಧ ವಾಪಾಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ʼಈ ಹಿಂದೆ ಮುಹಮ್ಮದ್ ತುಘಲಕ್ ನನ್ನು ಹುಚ್ಚು ದೊರೆ ಅಂತಾ ಕರೆಲಾಗುತ್ತಿತ್ತು. ಅದೇ ರೀತಿ ಸಿದ್ದರಾಮಯ್ಯ ಹುಚ್ಚು ದೊರೆ ಆಗುತ್ತಿದ್ದಾರೆʼ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಹಿಜಾಬ್ ವಿಚಾರ ಕೋರ್ಟ್ ನಲ್ಲಿದ್ದು, ನಾವೇನು ಮಾಡಲು ಆಗುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮುಸಲ್ಮಾನರ ಒಲೈಕೆ ಮಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಬಡಿದಾಡುತ್ತಲೇ ಇರಲಿ ಎಂಬುದು ಸಿದ್ದರಾಮಯ್ಯ ಅವರ ಆಸೆ. ಒಂದು ಕಡೆ ಮುಸಲ್ಮಾನರನ್ನು ಎತ್ತಿಕಟ್ಟಿ ಕುತಂತ್ರದ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಕಾಂಗ್ರೆಸ್ ಪಡೆದುಕೊಂಡಿತು.ಈ ಬಾರಿ ಎಲ್ಲ 28 ಸೀಟುಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಭಯ ಅವರಿಗೆ ಹುಟ್ಟಿದೆ. ಹಾಗಾಗಿ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯನವರು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ಜಮೀರ್ ಅಹಮ್ಮದ್ ಅವರು ಸ್ಪೀಕರ್ ಗೆ ಎಲ್ಲರೂ ತಲೆಬಾಗು ಬೇಕು ಅಂತಾರೆ. ಮುಸ್ಲಿಮ್ ಓಟು ಕಾಂಗ್ರೆಸ್ ಗೆ ಬೀಳಬೇಕು ಎಂಬ ಒಂದೇ ಉದ್ದೇಶ ಅವರದ್ದು ಎಂದರು.
ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರ ಇದೆ. ಕಾನೂನು ಸಚಿವರು ಈಗಲಾದರೂ ನಾನು ಇದ್ದೀನಿ ಅಂತಾ ತೋರಿಸಬೇಕು. ಕಾನೂನು ಸಚಿವ ಕಾನೂನು ಓದಿದ್ದರೆ ಇದನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು. ಹಿಜಾಬ್ ಆದೇಶ ಜಾರಿಗೆ ತರಲು ಅವಕಾಶ ಕೊಡಬಾರದು. ಇದು ಒಂದು ವೇಳೆ ಜಾರಿಯಾದರೆ ಕಾನೂನು ಸಚಿವರಾಗಿ ಮುಂದುವರಿಯಬಾರದು. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಬಿಜೆಪಿ ಪಕ್ಷದ ವತಿಯಿಂದ ಕಾನೂನು ಹೋರಾಟ ಮಾಡ್ತೀವಿ. ಯಾವುದೇ ಕಾರಣಕ್ಕೂ ಕಾನೂನು ಹೋರಾಟ ಬಿಡುವುದಿಲ್ಲ ಎಂದರು.