ಮಹಿಳೆಯರ ಕುರಿತು ಹೇಳಿಕೆ | ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಮಹಿಳಾ ಆಯೋಗದಿಂದ ನೋಟಿಸ್
ಬೆಂಗಳೂರು: ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ತುಚ್ಛವಾಗಿ ಮಾತನಾಡಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ತುಮಕೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಳ್ಳಿಯ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಲಿದೆ ಎಂದು ತಿಳಿಸಿದ್ದಾರೆ.
‘ಗ್ಯಾರೆಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಲಿದೆ. ಅದೇ ರೀತಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ತುಚ್ಛವಾಗಿ ಮಾತನಾಡಿರುವ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧವೂ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಲಿದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಮಹಿಳೆಯರ ಬಗ್ಗೆ ಹಾಗೂ ಅವರ ಘನತೆಯನ್ನು ಕುಂದಿಸುವ ರೀತಿಯಲ್ಲಿ ಹೇಳೀಕೆ ನೀಡುತ್ತಿರುವುದು ದುರದೃಷ್ಟಕರ. ಈ ವಿಚಾರವನ್ನು ಸಾಮಾಜಿಕ ದೃಷ್ಟಿಕೋನದಿಂದ ಗಂಬೀರವಾಗಿ ಪರಿಗಣಿಸಿ ಮಹಿಳಾ ಆಯೋಗ ನಿರ್ಧಾಕ್ಷ್ಯಿಣ್ಯ ಕ್ರಮವನ್ನು ಕೈಗೊಳ್ಳುತ್ತದೆ ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.