ತೆರಿಗೆ ಹಂಚಿಕೆಯಲ್ಲಿ ಮಲತಾಯಿ ಧೋರಣೆ; ಫೆ.7ರಂದು ಕೇಂದ್ರದ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ
"ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ ಕೇಂದ್ರದಿಂದ ನಮಗೆ ಮೋಸವಾಗುತ್ತಿದೆ"
Photo:X/@DKShivakumar
ಬೆಂಗಳೂರು: ಕೇಂದ್ರ ಸರಕಾರವು ರಾಜ್ಯದ ಪಾಲಿನ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ, ಬರ ಪರಿಹಾರ ವಿತರಣೆ ಮಾಡುವಲ್ಲಿ ಮಲತಾಯಿ ಧೋರಣೆ ಮತ್ತು ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ಫೆ.7ರಂದು ದಿಲ್ಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಇದರಲ್ಲಿ ಎಲ್ಲ ಶಾಸಕರು, ವಿಧಾನ ಪರಿಷತ್, ಸಂಸದರು ಭಾಗವಹಿಸಲಿದ್ದಾರೆ. ಬಿಜೆಪಿಯವರೂ ಭಾಗಿಯಾಗಲಿ ಎಂದು ಒತ್ತಾಯಿಸಿದರು.
ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೂ ನಮಗೆ ತೆರಿಗೆ ಹಣದಲ್ಲಿ ಮೋಸವಾಗುತ್ತಿದೆ. ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 45 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆ ಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ ಎಂದರು.
ರಾಜ್ಯಕ್ಕೆ ನಿರಂತರ ಅನ್ಯಾಯ
ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರಗೆ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ. ಬರಗಾಲ ಪರಿಹಾರದ ಹಣವೂ ಇಲ್ಲ. 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ ಎಂದರು. ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟ:
ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಜನರ ಸೇವೆಯನ್ನು ಮಾಡಲು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರಕಾರದ ತೆರಿಗೆ ಹಣವೆಂದರೆ ರಾಜ್ಯಗಳಿಂದ ಬರುವ ತೆರಿಗೆ ಹಣ , ಸೆಸ್, ಪೆಟ್ರೋಲ್ ಡೀಸೆಲ್, ಸರ್ಚಾರ್ಜ್. ಇವುಗಳಿಂದ ಸಂಗ್ರಹ ವಾಗುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚನೆಯಾಗಿದೆ. ಸಂವಿಧಾನದ 7 ನೇ ಪರಿಚ್ಛೇಧ ಅದನ್ನು ಸ್ವತಂತ್ರ ಸಂಸ್ಥೆಯಾಗಿಸಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳು ಆಗಿವೆ. ಪ್ರಸ್ತುತ 16 ನೇ ಹಣಕಾಸು ಆಯೋಗ ರಚನೆಯಾಗಿದ್ದು, ಅಧ್ಯಕ್ಷರ ನೇಮಕವಾಗಿದೆ.
14 ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71% ಇದ್ದದ್ದು, 15 ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಕೆಯಾಯಿತು. ಅಂದರೆ ಶೇ 1.07% ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತ ಆಯಿತು. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ನಮ್ಮ ರಾಜ್ಯಕ್ಕೆ ನಗದು ಹಂಚಿಕೆಯಲ್ಲಿ 62098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
GST ನಲ್ಲಿ ರಾಜ್ಯಕ್ಕೆ ಅನ್ಯಾಯ
GST ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ 15% ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತೆ ಎಂದು ಕೇಂದ್ರ ಸರಕಾರ ಹೇಳಿತ್ತು. ಆದರೆ ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು. ಈ ಪರಿಹಾರ ಜೂನ್ 2022 ಕ್ಕೆ ನಿಲ್ಲಿಸಿದ್ದಾರೆ. ಈಗ ಪರಿಹಾರ ಕೊಡ್ತಾ ಇಲ್ಲ. 5 ವರ್ಷಗಳ ಕಾಲ ಮಾತ್ರ ಪರಿಹಾರ ಕೊಟ್ಟರು. ಇದರಿಂದಾಗಿ ಈಗ ನಮ್ಮ ತೆರಿಗೆ ಬೆಳವಣಿಗೆ 15% ಗೆ ಮತ್ತೆ ತಲುಪಲು ಆಗಲೇ ಇಲ್ಲ. ಹೀಗಾಗಿ ಪರಿಹಾರ ಮುಂದುವರೆಸಿ ಎಂದು ಕೇಳಿದೆವು. ಇವತ್ತಿನವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನವನ್ನೇ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಈಗಲೂ ನಮಗೆ , ನಮ್ಮ ರಾಜ್ಯಕ್ಕೆ GST ನಲ್ಲಿ ಅನ್ಯಾಯ ಆಗುತ್ತಲೇ ಇದೆ ಎಂದರು.
ರಾಜ್ಯದಿಂದ ನಾವು ಕೊಡುವ 100 ರೂ. ಗಳಲ್ಲಿ 12 ರೂ. ಮಾತ್ರ ನಮಗೆ ವಾಪಾಸ್ ಬರುತ್ತಿದೆ.
ರಾಜ್ಯದಿಂದ ಪ್ರತಿ ವರ್ಷ ಕೇಂದ್ರಕ್ಕೆ 4, 30,000 ಕೋಟಿ ತೆರಿಗೆ ವಸೂಲಿ ಆಗಿ ಹೋಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ 37, 252 ಕೋಟಿ ಬರುವುದು. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ಎರಡೂ ಸೇರಿ ಕೇವಲ 50,257 ಕೋಟಿ ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.
ಒಟ್ಟು ಲೆಕ್ಕದಲ್ಲಿ ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ 12- 13 ರೂ.ಗಳು ಮಾತ್ರ ವಾಪಾಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರವೇ ಒದಗಿಸಿದ ಅಂಕಿ ಅಂಶಗಳನ್ನು ಮುಂದಿಟ್ಟು ವಿವರಿಸಿದರು.
2017-18 ರಲ್ಲಿ ಕೇಂದ್ರದ ಬಜೆಟ್ ಗಾತ್ರ 21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ 31908 ಕೋಟಿ, ಗ್ರಾಂಟ್ಸ್ ಹಾಗೂ ನಗದು ಹಂಚಿಕೆ 16072 ಕೋಟಿ,,ಎರಡೂ ಸೇರಿಸಿ 47990 ಕೋಟಿ ಸಿಕ್ಕಿತ್ತು.
2018-19 ರಲ್ಲಿ ಕೇಂದ್ರ ಬಜೆಟ್ ಗಾತ್ರ 24,42,213 ಕೋಟಿಗೆ ವೃದ್ಧಿಸಿತು. ಆಗ ನಗದು ಹಂಚಿಕೆ ಸಿಕ್ಕಿದ್ದು 36215 ಕೋಟಿ. ಇಲ್ಲಿ 2000 ಕೋಟಿ ಕಡಿಮೆ ಆಯಿತು.
ಶಬರಿಯಂತೆ ಕಾದರೂ ಪ್ರಯೋಜನವಿಲ್ಲ
ಸೆಪ್ಟೆಂಬರ್ 23 ರಂದು ಕೇಂದ್ರ ತಂಡ ಬಂದು ಬರಗಾಲ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದೆ. ಬಳಿಕ ಶಬರಿ ಕಾದಂತೆ ನಮ್ಮ ಮಂತ್ರಿಗಳು ಭೇಟಿಗೆ ಕಾದು ವಾಪಾಸ್ ಬಂದಿದ್ದಾರೆ. ಭೇಟಿ ಮಾಡಿದಾಗ ಸಭೆ ಕರೆಯುತ್ತೇನೆ ಎಂದ ಅಮಿತ್ ಶಾ ಇವತ್ತಿನವರೆಗೂ ಸಭೆಯನ್ನೇ ಕರೆದಿಲ್ಲ. ಸಭೆ ಕರೆಯದೆ ಬರ ಪರಿಹಾರ ಬರುವುದೇ ಇಲ್ಲ. ಇವರು ಸಭೆ ಕರೆದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವತ್ತಿನವರೆಗೂ ಪ್ರಾಥಮಿಕ ಸಭೆಯನ್ನೇ ಕರೆದಿಲ್ಲ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ ಮನವಿ ಮಾಡಿದ್ದೆ. 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ. ಇದಕ್ಕೆ 17901 ಕೋಟಿ ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. NDRF ನಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ. 2019 ರಲ್ಲಿ ಪ್ರವಾಹ ಬಂದಾಗ CM ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ NDRF ಗಾಗಿ ಗೋಗರೆದರೂ ಪರಿಹಾರ ಕೊಡಲಿಲ್ಲ ಎಂದರು.
ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ
ಯಡಿಯೂರಪ್ಪ, ಬೊಮ್ಮಾಯಿಯವರು ಪ್ರಧಾನಿಗಳ ಮುಂದೆ ಬಾಯಿ ಬಿಡುವುದಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗೆ ಈ ವಿಷಯಗಳೆಲ್ಲಾ ಅರ್ಥವೇ ಆಗಲ್ಲ. ಪ್ರಹ್ಲಾದ್ ಜೋಷಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿದ್ದಾರೆ. 27 ಜನ ಸಂಸದರು ಸಂಸತ್ತಿನಲ್ಲಿ ಮಾತೇ ಆಡಿಲ್ಲ. ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇವರು ರಾಜ್ಯದ ಪರವಾಗಿ ಪಾರ್ಲಿಮೆಂಟಲ್ಲಿ ಬಾಯಿಯನ್ನೇ ಬಿಡುತ್ತಿಲ್ಲ. 11 ಸಾವಿರ ಕೋಟಿ ಕೇಂದ್ರ ಹಣಕಾಸು ಸಚಿವರಿಂದಲೇ ತಿರಸ್ಕಾರವಾಗಿದೆ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಉಪಸ್ಥಿತರಿದ್ದರು.