ಮೈಸೂರು: ರೈತ ಮುಖಂಡರೊಂದಿಗೆ ಸಿಎಂ ಸಂಧಾನ ಯಶಸ್ವಿ
ನ.21 ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಲಕರು, ಸಚಿವರ ಜೊತೆ ಸಭೆ: ಸಿದ್ದರಾಮಯ್ಯ ಭರವಸೆ
ಮೈಸೂರು,ನ.18: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕಲು ಯತ್ನಿಸಿದ್ದ ರೈತರನ್ನು ವಶಕ್ಕೆ ಪಡೆದಿದ್ದ ಪೊಲೀಸರ ನಡೆಯಿಂದ ಆಕ್ರೋಶಗೊಂಡಿದ್ದ ರೈತರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರನ್ನು ಸಮಾಧಾನಪಡಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ಶನಿವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗವನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಇದೇ ವೇಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆ ಕಳೆದ ವರ್ಷಕ್ಕಿಂತ 50ರಷ್ಟು ಕಡಿಮೆ ಇದ್ದು ಬೇರೆ ಜಿಲ್ಲೆಗಳ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬಿನ ಹೆಚ್ಚುವರಿ ದರ ನೀಡುತ್ತಿದ್ದಾರೆ ನಿಮ್ಮ ಕ್ಷೇತ್ರದ ಬಣ್ಣಾರಿ ಕಾರ್ಖಾನೆಯಲ್ಲಿ ಅತಿ ಕಡಿಮೆ ನೀಡುತ್ತಿದ್ದಾರೆ 4 ತಿಂಗಳಿಂದ ನಾಲ್ಕು ಸಭೆ ನಡೆದರು ರೈತರಿಗೆ ನ್ಯಾಯ ಸಿಕ್ಕಿಲ್ಲ ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಿದೆ ರೈತರಿಗೆ ಹಗಲು ಹೊತ್ತಿನಲ್ಲಿ 10 ಗಂಟೆ ವಿದ್ಯುತ್ ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು ಅದು ಹುಸಿಯಾಗಿದೆ. ಅದರಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.
ರೈತರ ಮಾತುಗಳನ್ನು ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಇದೇ ತಿಂಗಳ 21 ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಲಕರು ಮತ್ತು ಸಕ್ಕರೆ ಸಚಿವರ ಸಭೆ ಕರೆಯುತ್ತೇನೆ ಅಲ್ಲಿ ಚರ್ಚಿಸಿ ರೈತರ ರಕ್ಷಣಾತ್ಮಕ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಮುಂದಿನ ದಿನಗಳಲ್ಲಿ ಹೋರಾಟಗಾರರ ಬಗ್ಗೆ ಪೊಲೀಸರ ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತೇನೆ ಎಂದು ತಿಳಿಸಿದರು.
ನಿಯೋಗದಲ್ಲಿ ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಚುಂಚರಾಯನಹುಂಡಿ ಸಿದ್ದರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.