ಬಗರ್ ಹುಕುಂ ಸಮಿತಿಯ ಗಮನಕ್ಕೆ ತರದೇ ಲಕ್ಷಾಂತರ ಅರ್ಜಿ ತಿರಸ್ಕಾರ : ಸುನೀಲ್ ಕುಮಾರ್
ವಿ.ಸುನೀಲ್ ಕುಮಾರ್
ಬೆಂಗಳೂರು : ಅಕ್ರಮ-ಸಕ್ರಮ(ಬಗರ್ ಹುಕುಂ) ಸಮಿತಿಯ ಅವಗಾಹನೆಗೆ ತರದೇ ಕಂದಾಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ಅರ್ಜಿ ತಿರಸ್ಕರಿಸಿರುವುದು ಸರಕಾರದ ರೈತ ವಿರೋಧಿ ಕ್ರಮ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲೆನಾಡು, ಕರಾವಳಿ ಭಾಗಗಳು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆ ಮಾಡಿದೆ. ಅರ್ಜಿಯ ಅಂಗೀಕಾರ ಅಥವಾ ತಿರಸ್ಕಾರ ಈ ಸಮಿತಿಯಲ್ಲೇ ಆಗಬೇಕು. ಆದರೆ ಅಧಿಕಾರಿಗಳು ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ನಿರಾಕರಿಸುತ್ತಿರುವುದು ಸಂವಿಧಾನ ಬಾಹಿರ ಎಂದು ದೂರಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಗರ್ ಹುಕುಂ ವಿಚಾರ ಇತ್ಯರ್ಥಗೊಳಿಸಲು ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಚಿವರ ಸೂಚನೆಯ ಮೇರೆಗೆ ಅರ್ಜಿ ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಅರ್ಜಿ ಕೈ ಬಿಡುವಂತೆ ಗುರಿ ನಿಗದಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಸರಕಾರ ಈ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ಈ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಇದರಿಂದ ಕಂಗಾಲಾಗಿದ್ದಾರೆ. ಅರ್ಜಿ ತಿರಸ್ಕರಿಸುವಾಗ ಅಧಿಕಾರಿಗಳು ರೈತರ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಇಂಥ ಏಕಪಕ್ಷೀಯ ನಡವಳಿಕೆ ತಕ್ಷಣ ನಿಲ್ಲಿಸಿ ರೈತರಿಗೆ ನ್ಯಾಯ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.