ಗಾಂಧಿವಾದದಿಂದ ‘ಮಾವೋವಾದ’ಕ್ಕೆ ಹೊರಳಿದ ಕಾಂಗ್ರೆಸ್ ಸರಕಾರ : ಸುನಿಲ್ ಕುಮಾರ್
ವಿ.ಸುನಿಲ್ ಕುಮಾರ್
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್, ಸರಕಾರದ ನಕ್ಸಲ್ ಪ್ಯಾಕೇಜ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೇಸ್ಬುಕ್ನಲ್ಲಿ ಸರಕಾರದ ನಡೆಯನ್ನು ಖಂಡಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವವರು, ಈಗ ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂ ಗುಚ್ಚ ಕೊಟ್ಟು ಸ್ವಾಗತಿಸಿ, ಸಮೋಸಾ ನೀಡುತ್ತಿದ್ದಾರೆ ಎಂದು ಕಿಡಿಗಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ-ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯನವರ ಕೋರ್ ಕಮಿಟಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಅರಚಿದರೂ ನಾವು ಹೆದರುವುದಿಲ್ಲ. ಅಷ್ಟಕ್ಕೂ ಬೇಕಾಬಿಟ್ಟಿ ಪ್ಯಾಕೇಜ್ ಘೋಷಿಸುವುದಕ್ಕೆ ರಾಜ್ಯದ ಬೊಕ್ಕಸದ ಹಣ ಯಾರದೋ ಜಮೀನು ನುಂಗಿ-ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ನಿವೇಶನವಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿ ಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಲಿ ಮುಖ್ಯಮಂತ್ರಿಯ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿರುವ ಅವರು, ಒಂದೆಡೆ ನಕ್ಸಲ್ ಶರಣಾಗತಿ ಬಗ್ಗೆ ಮಾತನಾಡುವ ಸರಕಾರ, ಅರಣ್ಯವಾಸಿಗಳಿಗೆ ಪುನರ್ಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.