ನಕ್ಸಲರ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ? : ಸುನಿಲ್ ಕುಮಾರ್
ಸುನಿಲ್ ಕುಮಾರ್
ಬೆಂಗಳೂರು : ನಕ್ಸಲ್ ಶರಣಾಗತಿ ವಿಚಾರದಲ್ಲಿ ಪ್ರಶ್ನೆಗಳಿವೆ. ಪ್ರಶ್ನಿಸುತ್ತೇವೆ. ಉತ್ತರಿಸಬೇಕಾದವರಿಗೆ ಉತ್ತರದಾಯಿತ್ವ ಇದೆ ಎಂದು ಭಾವಿಸಿದ್ದೇನೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಮೊದಲನೆಯದಾಗಿ ಈ ನಕ್ಸಲ್ ಶರಣಾಗತಿ ಡ್ರಾಮಾ ಇಷ್ಟು ಕ್ಷಿಪ್ರವಾಗಿ ಅಂತ್ಯ ಕಂಡಿದ್ದು ಹೇಗೆ? ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಸ್ವಯಂ ಪ್ರೇರಿತವಾಗಿ ಕೊಟ್ಟ ಕರೆಗೆ ನಕ್ಸಲರು ಇಷ್ಟು ವೇಗವಾಗಿ ಸ್ಪಂದಿಸುತ್ತಾರೆಂದರೆ ಇದೊಂದು ಪೂರ್ವ ಯೋಜಿತ ಸ್ಟೇಜ್ ಶೋ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಕ್ಸಲರೇನೋ ಶರಣಾದರು, ಆದರೆ ಅವರ ಬಳಿ ಇದ್ದ ಬಂದೂಕುಗಳು ಏನಾದವು? ಶರಣಾಗತಿ ಪ್ರಕ್ರಿಯೆ ಎಂದರೆ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಲ್ಲವೇ? ಇಲ್ಲೇಕೆ ಈ ನಿಯಮ ಪಾಲಿಸಿಲ್ಲ? ಹಾಗಾದರೆ ಈ ಶಸ್ತ್ರಾಸ್ತ್ರಗಳನ್ನು ಯಾರಿಗೆ ನೀಡಲಾಗಿದೆ? ಬೇಕಾಬಿಟ್ಟಿ ಕಾಡಿನಲ್ಲಿ ಎಸೆದು ಬರಲು ಸಾಧ್ಯವಿಲ್ಲ. ಹಾಗಾದರೆ ಯಾವ ನಗರ ನಕ್ಸಲರ ಮನೆಯಲ್ಲಿ ಈ ಬಂದೂಕನ್ನು ಗುಬ್ಬಿಗೂಡು ಕಟ್ಟುವುದಕ್ಕೆ ಇಟ್ಟಿದ್ದೀರಿ? ಎಂದು ಅವರು ಕೇಳಿದ್ದಾರೆ.
ನಕ್ಸಲ್ ವಿಕ್ರಮ್ಗೌಡ ಎನ್ಕೌಂಟರ್ ಬಗ್ಗೆ ಈಗ ಅನುಮಾನ ಹೆಚ್ಚಿದೆ. ಆತ ಶರಣಾಗತಿ ಪ್ಯಾಕೇಜ್ ಬಗೆ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ಶರಣಾಗತಿ ಪ್ರಹಸನದ ರೂವಾರಿಗಳೇ ವಿಕ್ರಮ್ಗೌಡನ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲೂಬಹುದಲ್ಲವೇ? ಹೀಗಾಗಿ ಈ ಬಗ್ಗೆ ತನಿಖೆ ಅನಿವಾರ್ಯ ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಕರ್ನಾಟಕ ನಕ್ಸಲ್ ಚಳವಳಿಯಿಂದ ಮುಕ್ತವಾಗಿದೆ ಎಂದು ಸರಕಾರ ಯಾವ ಮಾನದಂಡದ ಆಧಾರದಿಂದ ಹೇಳುತ್ತಿದೆ? ಈ ಬಗ್ಗೆ ಎಎನ್ಎಫ್ ಕಮಾಂಡರ್ ಅಥವಾ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅಧಿಕೃತ ಘೋಷಣೆ ಮಾಡಬಲ್ಲರೇ? ಅದೇ ರೀತಿ ಅರಣ್ಯದಂಚಿನ ನಿವಾಸಿಗಳ ಪುನರ್ವಸತಿಗೆ ರಾಜ್ಯ ಸರಕಾರ ಇದುವರೆಗೆ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನೂ ಸ್ಪಷ್ಟಪಡಿಸಿ ಎಂದು ಅವರು ಕೇಳಿದ್ದಾರೆ.