ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೂರ್ನಾಲ್ಕು ತಿಂಗಳಲ್ಲಿ ಈ ಭಾಗದ ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಕೆಯಾಗಲಿದೆ. ಈ ಕುರಿತು ಅಧಿಕಾರಿಗಳಿಗೆ ಮಾತುಕತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಯಲಚೇನಹಳ್ಳಿಯಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳು ಈ ಭಾಗದ ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಸುವತ್ತ ಆದ್ಯತೆ ನೀಡಬೇಕು. ಸಂಸದ ಡಿ.ಕೆ. ಸುರೇಶ್ ಈ ಭಾಗದ ಟ್ರಾಫಿಕ್ ಸಮಸ್ಯೆ ಹಾಗು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದರು.
ಕೃಷ್ಣಪ್ಪ ಅವರ ಕ್ಷೇತ್ರದಲ್ಲಿರುವ 18 ಕಿ.ಮೀ. ರಸ್ತೆಯ ಒತ್ತಡ ಕಡಿಮೆ ಮಾಡಲು ಪರ್ಯಾಯ ರಸ್ತೆ ಮಾಡಬೇಕಿದೆ. ಕನಕಪುರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಧ್ಯೆ ಹೊಸ ರಸ್ತೆ ಯೋಜನೆಗೆ ಈ ಹಿಂದೆ ಬಿಡಿಎ ನೋಟಿಫಿಕೇಶನ್ ಆಗಿದ್ದು, ಅದಕ್ಕೆ ಮರುಜೀವ ನೀಡಲು ಪ್ರಯತ್ನ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ 1.04 ಕೋಟಿ ಜನರಿಗೆ ಪ್ರತಿ ತಿಂಗಳು ತಲಾ 2ಸಾವಿರ ರೂ.ಹಣ ತಲುಪುತ್ತಿದೆ. ಬೆಸ್ಕಾಂನಲ್ಲಿ 80ಲಕ್ಷ ಸಂಪರ್ಕಗಳಿದ್ದು, 67ಲಕ್ಷ ಜನರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಮೂಲಕ ಬೆಂಗಳೂರಿನ ಶೇ.74ರಷ್ಟು ಜನರು ಇದರ ಉಪಯೋಗ ಪಡೆದಿದ್ದಾರೆ. ಇದಕ್ಕಾಗಿ ಸರಕಾರ 362 ಕೋಟಿ ರೂ. ಹಣ ನೀಡಿದೆ ಎಂದು ಶಿವಕುಮಾರ್ ಹೇಳಿದರು.
ಈ ಭಾಗದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಖಾತೆ ಸಮಸ್ಯೆ, ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿವೆ. ಜನರ ತೆರಿಗೆ ಹೊರೆ ಇಳಿಸುವ ವಿಚಾರದಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಶೀಲಿಸಿ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ. 2020ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ದುಪ್ಪಟ್ಟು ದಂಡ ಕಟ್ಟುವಂತಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜನರಿಗೆ ಕಾಲಾವಕಾಶ ನೀಡಿ, ಪರಿಹಾರವನ್ನು ನೀಡಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್, ಬಿಡಿಎ ಆಯುಕ್ತ ಜಯರಾಮ್, ಜಿಲ್ಲಾಧಿಕಾರಿ ದಯಾನಂದ್, ರಾಮಪ್ರಶಾತ್ ಮನೋಹರ್ ಮತ್ತಿತರರು ಭಾಗವಹಿಸಿದ್ದರು.